ನ್ಯೂಯಾರ್ಕ್, ಸೆ. 10 (DaijiworldNews/PY): "ಕೊರೊನಾ ಡೆಲ್ಟಾ ರೂಪಾಂತರ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೊರೊನಾ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸುವ ಸಲುವಾಗಿ ನೂತನವಾದ ಯೋಜನೆಗಳನ್ನು ರೂಪಿಸಬೇಕು" ಎಂದು ಅಧಿಕಾರಿಗಳಿಗೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಸೂಚಿಸಿದ್ದಾರೆ.
"ನೂರು ಮಿಲಿಯನ್ ಅಮೇರಿಕನ್ನರಿಗೆ ಕೊರೊನಾ ಲಸಿಕೆಯನ್ನು ತ್ವರಿತವಾಗಿ ನೀಡಬೇಕಿದೆ. ಅಲ್ಲದೇ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಖಾಸಗಿ ವಲಯದ ನೌಕರರು ಹಾಗೂ ಇತರೆ ಸಿಬ್ಬಂದಿಗೆ ಲಸಿಕೆಗಳನ್ನು ನೀಡುವ ನಿಟ್ಟಿನಲ್ಲಿ ತುರ್ತು ಯೋಜನೆಗಳನ್ನು ರೂಪಿಸಬೇಕಿದೆ" ಎಂದಿದ್ದಾರೆ.
"ಕೊರೊನಾ ಲಸಿಕೆ ಪಡೆದುಕೊಳ್ಳಲು ಜನರನ್ನು ಮನವೊಲಿಸಬೇಕು. ಲಸಿಕೆ ಹಾಕಿಸಿಕೊಂಡವರು ಹಾಗೂ ವೈದ್ಯಕೀಯ ಸಿಬ್ಬಂದಿಯ ಆರೋಗ್ಯದ ಮೇಲೂ ಕೂಡಾ ನಿಗಾ ವಹಿಸಬೇಕು" ಎಂದು ಹೇಳಿದ್ದಾರೆ.
"ಕೊರೊನಾ ಲಸಿಕೆಗಳು ಲಭ್ಯವಾಗಿ ಹಲವರು ಸಮಯ ಕಳೆದಿದ್ದರೂ ಕೂಡಾ ಲಕ್ಷಾಂತರ ಅಮೇರಿಕನ್ನರು ಏಕೆ ಇನ್ನೂ ಲಸಿಕೆ ಪಡೆದಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ಮೊದಲು ನಾವು ತಾಳ್ಮೆಯಿಂದ ಇದ್ದೆವು. ಆದರೆ, ನಮ್ಮ ತಾಳ್ಮೆ ಕಳೆದುಹೋಗುತ್ತಿದೆ ಹಾಗೂ ಲಸಿಕೆ ಪಡೆಯುವ ನಿರಾಕರಣೆಯ ಕಾರಣದಿಂದ ನಮಗೆ ನಷ್ಟ ಉಂಟಾಗಿದೆ" ಎಂದಿದ್ದಾರೆ.