ಕಾಬೂಲ್, ಸೆ.12 (DaijiworldNews/PY): "ಅಫ್ಗಾನಿಸ್ತಾನದ ಮಹಿಳೆಯರು ಸ್ನಾತಕೋತ್ತರ ಪದವಿಯನ್ನು ಒಳಗೊಂಡಂತೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮುಂದುವರಿಸಬಹುದು. ಆದರೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ತರಗತಿ ಕೊಠಡಿಗಳು ಇರಬೇಕು. ಅಲ್ಲದೇ, ಮಹಿಳೆಯರಿಗೆ ಇಸ್ಲಾಮಿಕ್ ಉಡುಗೆ ಕಡ್ಡಾಯ" ಎಂದು ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಾಖಿ ಹೇಳಿದ್ದಾರೆ.
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರು ಕಡ್ಡಾಯವಾಗಿ ಹಿಜಬ್ ಧರಿಸಬೇಕು" ಎಂದಿದ್ದಾರೆ
ತಲೆಗೆ ಸ್ಕಾರ್ಫ್ ಕಡ್ಡಾಯವೋ ಅಥವಾ ಮುಖವನ್ನು ಮುಚ್ಚಬೇಕೇ ಎಂಬುದರ ಕುರಿತು ಅವರು ನಿಖರ ಮಾಹಿತಿ ನೀಡಿಲ್ಲ.
"ಪುರುಷರು ಹಾಗೂ ಮಹಿಳೆಯರಿಗೆ ಜೊತೆಯಾಗಿ ಅಧ್ಯಯನ ಮಾಡಲು ಅವಕಾಶವಿಲ್ಲ. ಹಾಗಾಗಿ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ತರಗತಿ ಕೊಠಡಿಗಳು ಇರಬೇಕು" ಎಂದು ತಿಳಿಸಿದ್ದಾರೆ.