ವಾಷಿಂಗ್ಟನ್, ಸ. 13 (DaijiworldNews/HR): ವಿಮಾನದಲ್ಲಿ ಮಾಸ್ಕ್ ಧರಿಸದೇ ಇರುವ ದಂಪತಿಯನ್ನು ಪ್ರಶ್ನಿಸಿದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಾಸ್ಕ್ ಧರಿಸಲು ನಿರಾಕರಿಸಿದ ದಂಪತಿ ಮತ್ತು ಅವರ ಮಕ್ಕಳನ್ನು ಜೆಟ್ ಬ್ಲೂ ವಿಮಾನದಲ್ಲಿದ್ದ ಸಿಬ್ಬಂದಿ ಹೊರಹಾಕಿದ್ದಾರೆ.
ಈ ವಿಮಾನ ಫ್ಲೋರಿಡಾ ಫೋರ್ಟ್ ಲಾಡರ್ನಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದತ್ತ ಹೊರಡಬೇಕಿತ್ತು. ಈ ವೀಡಿಯೋವನ್ನು ಆಲಿಸ್ ರುಸೋ ಎಂಬವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮದ್ಯದ ಅಮಲಿನಲ್ಲಿದ್ದ ದಂಪತಿಗಳು ಸರಿಯಾಗಿ ಮಾಸ್ಕ್ ಧರಿಸದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ನಾನು ಈ ವೀಡಿಯೋವನ್ನು ಪೋಸ್ಟ್ ಮಾಡಬೇಕೆಂದು ರೆಕಾರ್ಡ್ ಮಾಡಿಕೊಂಡೆ. ಅವರನ್ನು ನಿಭಾಯಿಸಿದ ಸಿಬ್ಬಂದಿಗೆ ನಿಜಕ್ಕೂ ಧನ್ಯವಾದ ತಿಳಿಸುತ್ತಾ ಮೆಚ್ಚುಗೆ ವ್ಯಕ್ತಪಡಿಸಬೇಕು.
ವಿಮಾನ ಸಿಬ್ಬಂದಿ ಮಹಿಳೆ ಮ್ಕಕಳೊಂದಿಗೆ ಬರುವಾಗ ಪ್ರವೇಶ ದ್ವಾರದಲ್ಲಿ ಮಾಸ್ಕ್ನನ್ನು ಸರಿಯಾಗಿ ಧರಿಸುವಂತೆ ತಿಳಿಸಿದ್ದು, ಮಹಿಳೆ ಅವರ ಮಾತನ್ನು ಕೇಳಲಿಲ್ಲ. ಮಹಿಳೆ ಮತ್ತು ಆಕೆಯ ಪತಿ ಮೂಗಿನಿಂದ ಕೆಳಗೆ ಮಾಸ್ಕ್ನನ್ನು ಧರಿಸಿದ್ದರು ಎಂದು ಆಲಿಸ್ ರುಸೋ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.