ಕಾಬೂಲ್, ಸೆ 15 (DaijiworldNews/MS): ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಪ್ರಜೆ 50 ವರ್ಷದ ಬನ್ಸಾರಿ ಲಾಲ್ ಅರೆಂದೆ, ಅವರನ್ನುಕಾಬೂಲ್ ನಲ್ಲಿ ಬಂದೂಕು ತೋರಿಸಿ ಅಪಹರಣ ಮಾಡಲಾಗಿದೆ ಎಂದು ವರದಿಯಾಗಿದೆ.
ಮಂಗಳವಾರ ಈ ಘಟನೆ ನಡೆದಿದ್ದು, ಬನ್ಸಾರಿ ಲಾಲ್ ಅವರನ್ನು ಬಂದೂಕಿನಿಂದ ಬೆದರಿಸಿ ಕಿಡ್ನಾಪ್ ಮಾಡಲಾಗಿದೆ ಎಂದು ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಮಾಹಿತಿ ನೀಡಿದ್ದಾರೆ.
“ನಾನು ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇನೆ ಮತ್ತು ಈ ನಿಟ್ಟಿನಲ್ಲಿ ಅವರ ತಕ್ಷಣದ ಮಧ್ಯಸ್ಥಿಕೆ ಮತ್ತು ಸಹಾಯವನ್ನು ಕೋರಿದ್ದೇನೆ” ಎಂದು ಪುನೀತ್ ಸಿಂಗ್ ಚಾಂದೋಕ್ ಹೇಳಿದರು.
ಸಿಖ್ ಕಾರ್ಯಕರ್ತ ಪುನೀತ್ ಸಿಂಗ್ ಚಾಂದೋಕ್ ಪ್ರಕಾರ, ಬನ್ಸಾರಿ ಲಾಲ್ ಅವರನ್ನು ಕಾಬೂಲ್ನಲ್ಲಿರುವ ತನ್ನ ಅಂಗಡಿಯ ಸಮೀಪದಿಂದ ಸೆಪ್ಟೆಂಬರ್ 14 ರ ಬೆಳಿಗ್ಗೆ ಅಪಹರಿಸಲಾಗಿದೆ.
ವರದಿಗಳ ಪ್ರಕಾರ ಬನ್ಸಾರಿ ಲಾಲ್ ಅರೆಂದೆ ಅವರ ಸಾಮಾನ್ಯ ದಿನಚರಿಯಂತೆ ಮಂಗಳವಾರ ಬೆಳಿಗ್ಗೆ ಅವರ ಸಿಬ್ಬಂದಿಯೊಂದಿಗೆ ಅವರ ಅಂಗಡಿಗೆ ತೆರಳಿದರು. ತನ್ನ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದಾಗ, ಅವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ನಂತರ ಅವರನ್ನು ಹಾಗೂ ಸಿಬ್ಬಂದಿಗಳನ್ನು ಥಳಿಸಿ ಗನ್ಪಾಯಿಂಟ್ನಲ್ಲಿ ಅಪಹರಿಸಲಾಗಿದೆ. ಈ ವೇಳೆ ಸಿಬ್ಬಂದಿಗಳು ತಪ್ಪಿಸಿಕೊಂಡಿದ್ದಾರೆ.
ಬನ್ಸಾರಿ ಲಾಲ್ ಅವರ ಕುಟುಂಬ ದೆಹಲಿ ಎನ್ಸಿಆರ್ನಲ್ಲಿ ವಾಸಿಸುತ್ತಿದೆ. ಸ್ಥಳೀಯ ಸಮುದಾಯವು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಸ್ಥಳೀಯ ತನಿಖಾ ಸಂಸ್ಥೆಗಳೊಂದಿಗೆ ಪ್ರಕರಣವನ್ನು ದಾಖಲಿಸಲಾಗಿದೆ. ಬನ್ಸಾರಿ ಪತ್ತೆಗಾಗಿ ಆತನ ಸ್ನೇಹಿತರು ವಿವಿಧ ಹುಡುಕಾಟ ನಡೆಸುತ್ತಿದ್ದಾರೆ.