ಇಸ್ಲಾಮಾಬಾದ್, ಸೆ.16 (DaijiworldNews/PY): "ತಾಲಿಬಾನಿಗಳನ್ನು ನಾವು ನಿಯಂತ್ರಿಸಬಹುದು ಎಂದು ಯೋಚನೆ ಮಾಡುವ ಬದಲು ಅಫ್ಗಾನ್ ಅನ್ನು ಉತ್ತೀಜಿಸುವುದರೊಂದಿಗೆ ತಾಲಿಬಾನಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲು ಜಗತ್ತು ಮುಂದಾಗಬೇಕು" ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪಾಕಿಸ್ತಾನ ಹಾಗೂ ಅಮೇರಿಕಾದಿಂದ ತಾಲಿಬಾನಿಗಳನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಯಾವುದೇ ಕೈಗೊಂಬೆ ಸರ್ಕಾರವನ್ನು ಅಫ್ಗಾನಿಸ್ತಾನದ ಜನರು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ" ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಅಫ್ಗಾನಿಸ್ತಾನದ ಮಹಿಳೆಯರಿಗೆ ಹೊರಗಿನವರಿಂದ ಹಕ್ಕುಗಳನ್ನು ನೀಡಲು ಸಾಧ್ಯವಾಗುತ್ತದೆ ಎನ್ನುವುದು ತಪ್ಪು. ಈಗಷ್ಟೇ ಅಲ್ಲಿನ ಸರ್ಕಾರ ರಚನೆಯಾಗಿದೆ. ತಮ್ಮ ಹಕ್ಕುಗಳನ್ನು ಖಂಡಿತವಾಗಿ ಮಹಿಳೆಯರು ಪಡೆದುಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.
"ಅಫ್ಗಾನ್ ಅನ್ನು ತಾಲಿಬಾನಿಗಳಿಗೆ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಮೇರಿಕಾದ ಸೇನಾ ಪಡೆಗಳನ್ನು ಅಲ್ಲಿಂದ ಹಿಂತೆಗೆದುಕೊಂಡ ನಂತರ ರಕ್ತಪಾತವಾಗುತ್ತದೆ ಎಂದು ಪಾಕ್ನ ಗುಪ್ತಚರ ಮಾಹಿತಿ ಹೊಂದಿತ್ತು" ಎಂದು ತಿಳಿಸಿದ್ದಾರೆ.
"ತಾಲಿಬಾನ್ಗೆ ಜಗತ್ತು ಕಾನೂನುಬದ್ಧವಾದ ಸರ್ಕಾರ ರಚಿಸಲು ಹಾಗೂ ಅಲ್ಲಿನ ಜನರ ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಕಾಲಾವಕಾಶ ನೀಡುವುದು ಮುಖ್ಯ" ಎಂದಿದ್ದಾರೆ.