ಕಾಬೂಲ್, ಸೆ.16 (DaijiworldNews/PY): "ಶೀಘ್ರವೇ ಅಫ್ಗಾನಿಸ್ತಾನದಲ್ಲಿ ಹೊಸ ಬಲಿಷ್ಠ ಸೈನ್ಯ ನಿರ್ಮಾಣ ಮಾಡಲಾಗುವುದು" ಎಂದು ತಾಲಿಬಾನ್ ಸೇನಾ ಮುಖ್ಯಸ್ಥ ಕರಿ ಫಾಸಿಹುದ್ದೀನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಫಾಸಿಹುದ್ದೀನ್, "ನಮ್ಮ ದೇಶದ ರಕ್ಷಣೆಗೆ ನಿಯಮಿತ ಹಾಗೂ ಬಲವಾದ ಸೈನ್ಯವನ್ನು ಹೊಂದಿರಬೇಕು. ಸೇನೆಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಸೇನೆಯ ಮಾಜಿ ಸದಸ್ಯರನ್ನು ಸೇರ್ಪಡೆಗೊಳಿಸಲಾಗುವುದು. ಬಾಹ್ಯ ಅಥವಾ ಆಂತರಿಕ ಬೆದರಿಕೆ ವಿರುದ್ಧ ತಾಲಿಬಾನ್ ನಿಲ್ಲುತ್ತದೆ" ಎಂದಿದ್ದಾರೆ.
"ಅಫ್ಗಾನ್ ಅನ್ನು ರಕ್ಷಿಸಲು ಬಲಿಷ್ಠ ಸೇನೆಯ ಅವಶ್ಯಕತೆ ಇದೆ. ಈ ಹಿನ್ನೆಲೆ ಶೀಘ್ರವೇ ಸೈನಿಕರ ನೇಮಕಾತಿ ನಡೆಯಲಿದೆ" ಎಂದು ತಿಳಿಸಿದ್ದಾರೆ.
"ನಿಯಮಿತ ಸೇನೆಯ ರಚನೆಗೆ ಕೆಲಸ ಮಾಡುತ್ತಿದ್ದಾರೆ. ಸೈನ್ಯ ರಚಿಸುವ ಯೋಜನೆಯನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು" ಎಂದಿದ್ದಾರೆ.