ಕಾಬೂಲ್, ಸೆ.17 (DaijiworldNews/PY): "ತಾಲಿಬಾನ್ ಮಹಿಳಾ ಉದ್ಯೋಗಿಗಳನ್ನು ಕಾಬೂಲ್ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದು, ಕೇವಲ ಪುರುಷ ಉದ್ಯೋಗಿಗಳಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಿದೆ" ಎಂದು ಸಚಿವಾಲಯ ಹೇಳಿದೆ.
ಸಚಿವಾಲಯದೊಳಕ್ಕೆ ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ತಾಲಿಬಾನ್ನ ಈ ತೀರ್ಮಾನದ ವಿರುದ್ದ ಸಚಿವಾಲಯದ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿರುವುದಾಗಿ ಹೇಳಿದೆ.
"ತಾಲಿಬಾನ್ 20 ವರ್ಷಗಳ ನಂತರ ಮತ್ತೆ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಅಫ್ಗಾನ್ನಲ್ಲಿ ಮಹಿಳೆಯರು ಈ ಹಿಂದಿನಂತೆ ಭಯದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ" ಎಂದು ತಜ್ಞರು ತಿಳಿಸಿದ್ದಾರೆ.
ಈ ಹಿಂದೆ ಅಫ್ಗಾನ್ನಲ್ಲಿ ತಾಲಿಬಾನ್ ಆಡಳಿತ ನಡೆಸಿದ್ದ ಸಂದರ್ಭ ಶರಿಯಾ ಕಾನೂನು ಜಾರಿಗೊಳಿಸಿದ್ದು, ಬಹಿರಂಗವಾಗಿ ಕಲ್ಲು ಹೊಡೆದು ಕೊಲ್ಲುವುದು, ಸಾರ್ವಜನಿಕ ಮರಣದಂಡನೆ ಘಟನೆ ನಡೆಸಿರುವುದನ್ನು ಇಂದಿಗೂ ಅಫ್ಗಾನ್ನ ಜನರು ನೆನೆಸಿಕೊಳ್ಳುತ್ತಾರೆ.
ಅಮೇರಿಕಾ ನೇತೃತ್ವದ ಮೈತ್ರಿ ಪಡೆ ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ತಾಲಿಬಾನ್ ಅಸ್ತಿತ್ವ ಕಳೆದುಕೊಂಡಿತ್ತು. ಅಮೇರಿಕಾದ ನೂತನ ಅಧ್ಯಕ್ಷ ಜೊ ಬಿಡೆನ್ ಅವರು ಅಫ್ಗಾನಿಸ್ತಾನದಲ್ಲಿದ್ದ ಅಮೇರಿಕಾ ಸೇನಾ ಪಡೆಯನ್ನು ವಾಪಾಸ್ಸು ಕರೆಸಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಅಮೇರಿಕಾ ಸೇನಾ ಪಡೆ ಅಫ್ಗಾನಿಸ್ತಾನದಿಂದ ವಾಪಾಸ್ಸಾಗುತ್ತಿದ್ದಂತೆಯೇ ತಾಲಿಬಾನ್ ಅಫ್ಗಾನ್ ಆಡಳಿತವನ್ನು ತನ್ನ ಕೈವಶ ಮಾಡಿಕೊಂಡಿತ್ತು.