ಕಾಬೂಲ್, ಸೆ.18 (DaijiworldNews/PY): "ಅಫ್ಗಾನಿಸ್ತಾನದಲ್ಲಿ ಇಂದಿನಿಂದ ಬಾಲಕರ ಶಾಲೆಗಳು ಪ್ರಾರಂಭವಾಗಲಿದೆ" ಎಂದು ತಾಲಿಬಾನ್ ಶಿಕ್ಷಣ ಸಚಿವಾಲಯ ಹೇಳಿದೆ. ಆದರೆ, ಬಾಲಕಿಯರ ಶಾಲೆಗಳ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.
"ಶನಿವಾರದಿಂದ ಪ್ರಾಥಮಿಕ, ಮಾಧ್ಯಮಿಕ ಮಟ್ಟದಲ್ಲಿ ರಾಜ್ಯ ಹಾಗೂ ಖಾಸಗಿ ಶಾಲೆಗಳು ಹಾಗೂ ಅಧಿಕೃತ ಮದರಸಾ ಧಾರ್ಮಿಕ ಶಾಲೆಗಳು ತೆರೆಯುತ್ತವೆ. ಶಾಲೆಗೆ ಎಲ್ಲಾ ಶಿಕ್ಷಕರು ಹಾಗೂ ಪುರುಷ ವಿದ್ಯಾರ್ಥಿಗಳು ಹಾಜರಾಗಬೇಕು" ಎಂದು ತಿಳಿಸಿದೆ.
"ಬಾಲಕಿಯರ ಶಿಕ್ಷಣವನ್ನು ನಿಷೇಧಿಸಿದ ಹಿಂದಿನ ತಾಲಿಬಾನ್ ಸರ್ಕಾರದ ಮೂಲಭೂತವಾದಿ ನೀತಿಗಳನ್ನು ಪುನರಾವರ್ತಿಸುವುದಿಲ್ಲ. ಹುಡುಗಿಯರು ಪ್ರತ್ಯೇಕಿಸಿದ ತರಗತಿಗಳಲ್ಲಿ ಅಧ್ಯಯನ ಮಾಡಬಹುದು" ಎಂದು ತಾಲಿಬಾನ್ ಹೇಳಿದೆ.
ಕಾಬೂಲ್ ಅನ್ನು ವಶಪಡಿಸಿಕೊಂಡ ಒಂದು ತಿಂಗಳ ಬಳಿಕ ತಾಲಿಬಾನ್ ಆರ್ಥಿಕತೆಯನ್ನು ತೆರೆಯಲು ಹಾಗೂ ನಗರಗಳಲ್ಲಿ ಸಾಮಾನ್ಯ ಜೀವನವನ್ನು ಪುನಃಸ್ಥಾಪಿಸಲು ಹೆಣಗಾಡುತ್ತಿರುವ ಕಾರಣ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾದ ಕೆಲ ಶಾಲೆಗಳ ಪೈಕಿ 6ನೇ ತರಗತಿಯವರಗೆ ಹುಡುಗಿಯರು ಹಾಜರಾಗಿದ್ದಾರೆ. ಆದರೆ, ಬಾಲಕಿಯರ ಪ್ರೌಢ ಶಾಲೆಗಳನ್ನು ಮುಚ್ಚಲಾಗಿದೆ.