ವಿಶ್ವಸಂಸ್ಥೆ, ಸೆ.22 (DaijiworldNews/PY): "ಕೊರೊನಾ ಸಾಂಕ್ರಾಮಿಕವನ್ನು ಬಾಂಬ್ ಹಾಗೂ ಬುಲೆಟ್ಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, "ಜಾಗತಿಕ ಸಮಸ್ಯೆಗಳ ಬಗ್ಗೆ ಎಲ್ಲಾ ರಾಷ್ಟ್ರಗಳು ಪ್ರಸ್ತಾಪಿಸಬೇಕು. ಕೊರೊನಾ ಸಾಂಕ್ರಾಮಿಕ ಸೇರಿದಂತೆ ಹವಾಮಾನ ವೈಪರೀತ್ಯ ಹಾಗೂ ಮಾನವ ಹಕ್ಕುಗಳ ಬಗ್ಗೆ ಮಾತನಾಡಬೇಕು" ಎಂದಿದ್ದಾರೆ.
"ಅಮೇರಿಕಾ ಚೀನಾದೊಂದಿಗೆ ಹೊಸ ಶೀತಲ ಸಮರ ನಡೆಸಲು ಬಯಸುತ್ತಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ವಿಶ್ವಾಸಾರ್ಹ ಅಂತರಾಷ್ಟ್ರೀಯ ಪಾಲುದಾರ ರಾಷ್ಟ್ರವಾಗಿ ಅಮೇರಿಕಾ ಮುಂದುವರಿಯಲಿದೆ. ಬಿಗಿಯಾದ ರಾಜತಾಂತ್ರಿಕತೆಯ ನೂತನ ಯುಗಾರಂಭ ಮಾಡುತ್ತಿದ್ದೇವೆ. ಜನರ ಅಭಿವೃದ್ದಿಗಾಗಿ ಜಗತ್ತಿನಾದ್ಯಂತ ಹೊಸ ರೀತಿಯಲ್ಲಿ ನಮ್ಮ ಹೂಡಿಕೆ ನಡೆಯಲಿದೆ" ಎಂದಿದ್ದಾರೆ.
"ಬಡ ರಾಷ್ಟ್ರಗಳಿಗೆ ಪರಿಸರ ಸ್ನೇಹಿ ಇಂಧನ ಬಳಕೆ ಸೇರಿದಂತೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಒದಗಿಸುವ ಹಣಕಾಸಿನ ಸಹಕಾರವನ್ನು ದುಪ್ಪಟ್ಟುಗೊಳಿಸುವ ಪ್ರತಿಜ್ಞೆ ಮಾಡಿದ್ದು, ವರ್ಷಕ್ಕೆ ಹಣಕಾಸು ಸಹಕಾರವನ್ನು 11.4 ಬಿಲಿಯನ್ ಡಾಲರ್ಗಳಿಗೆ ಹೆಚ್ಚಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.