ವಾಷಿಂಗ್ಟನ್, ಸೆ.24 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾ ಪ್ರವಾಸದಲ್ಲಿದ್ದು, ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದರು.
ಈ ವೇಳೆ "ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಚರ್ಚೆ ನಡೆಸಲಾಯಿತು" ಎಂದು ಮಾಧ್ಯಮಗಳಿಗೆ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಾಹಿತಿ ನೀಡಿದ್ದಾರೆ.
"ಭಯೋತ್ಪಾದನೆಯ ಬಗ್ಗೆ ಉಭಯ ನಾಯಕರ ಮಧ್ಯೆ ಚರ್ಚೆ ನಡೆಸಿದ್ದು, ಭಯೋತ್ಪಾದನೆಗೆ ಪಾಕ್ ಬೆಂಬಲ ನೀಡುತ್ತಿದೆ. ಉಗ್ರ ಸಂಘಟನೆಗಳು ಅಲ್ಲಿ ಕ್ರಿಯಾಶೀಲವಾಗಿವೆ" ಎಂದು ಹ್ಯಾರಿಸ್ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
"ಅಮೇರಿಕಾ ಹಾಗೂ ಭಾರತದ ಮೇಲೆ ಉಗ್ರ ಸಂಘಟನೆಗಳಿಂದ ಯಾವುದೇ ಪರಿಣಾಮ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಪಾಕ್ಗೆ ಹ್ಯಾರಿಸ್ ತಾಕೀತು ಮಾಡಿದ್ದಾರೆ. ಪ್ರಧಾನಿ ಮೋದಿ ಅವರು, ಭಯೋತ್ಪಾದನೆ ನಿಯಂತ್ರಿಸುವ ಹಾಗೂ ಮೇಲ್ವಿಚಾರಣೆ ನಡೆಸುವ ಅಗತ್ಯತೆಯ ಬಗ್ಗೆ ಹೇಳಿದ್ದು, ಕಮಲಾ ಹ್ಯಾರಿಸ್ ಅವರು ಇದಕ್ಕೆ ಒಪ್ಪಿಗೆ ನೀಡಿದ್ಧಾರೆ" ಎಂದು ಹರ್ಷ ಶೃಂಗ್ಲಾ ಹೇಳಿದ್ದಾರೆ.
ಈ ಸಂದರ್ಭ ಲಸಿಕೆ ರಫ್ತು ಬಗ್ಗೆ ಮಾತನಾಡಿದ ಕಮಲಾ ಹ್ಯಾರಿಸ್, "ಲಸಿಕೆ ರಫ್ತುಗಳನ್ನು ಶೀಘ್ರವೇ ಪುನರಾರಂಭಿಸುವುದಾಗಿ ಭಾರತ ಮಾಡಿದ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಪ್ರಸ್ತುತ ಭಾರತವು ದಿನಕ್ಕೆ ಹತ್ತು ಮಿಲಿಯನ್ ಜನರಿಗೆ ಲಸಿಕೆ ಹಾಕುತ್ತಿರುವುದು ಗಮನಿಸಬೇಕಾದ ಸಂಗತಿ" ಎಂದು ಹೇಳಿದ್ದಾರೆ.