ನ್ಯೂಯಾರ್ಕ್ , ಸೆ 25 (DaijiworldNews/MS): ವಿಶ್ವ ಸಂಸ್ಥೆಯ 76ನೇ ಸಭೆಯಲ್ಲಿ (ಯುಎನ್ಜಿಎ) ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣವನ್ನು 'ಸುಳ್ಳು ಹಾಗೂ ದುರುದ್ದೇಶಪೂರಿತ' ಎಂದು ಕರೆದಿರುವ ಭಾರತೀಯ ಪ್ರತಿನಿಧಿ ಸ್ನೇಹಾ ದುಬೇ, ಪಾಕಿಸ್ತಾನಕ್ಕೆ " ತಾನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳಿಂದ ತಕ್ಷಣ ಜಾಗ ಖಾಲಿ ಮಾಡಿ" ಎಂದು ಖಡಕ್ ಸಂದೇಶ ನೀಡಿದ್ದರು.
"ಪಾಕಿಸ್ತಾನದ ನಾಯಕರು ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ನನ್ನ ದೇಶದ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಪ್ರಚಾರ ಮಾಡಲು ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಭಯೋತ್ಪಾದಕರು ಉಚಿತ ಪಾಸ್ ನೊಂದಿಗೆ ಓಡಾಡಿಕೊಂಡಿರುವ ದೇಶವು ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುವುದು ಕೂಡ ಇದೇ ಮೊದಲೇನಲ್ಲ. ಮೊದಲು ನೀವು ಕಾನೂನುಬಾಹಿರ ಅಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಿ ಎಂದು ದೃಢವಾದ ಸಂದೇಶ ರವಾನಿಸಿದರು.
ಯುಎನ್ಜಿಎ ಸಭೆಯಲ್ಲಿ ವರ್ಚುಯಲ್ ಆಗಿ ಭಾಷಣ ಮಾಡಿದ್ದ ಇಮ್ರಾನ್ ಖಾನ್, ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು ಹಾಗೂ ಈ ಸಂಬಂಧ ಭಾರತೀಯ ಸರ್ಕಾರವನ್ನು ಟೀಕಿಸಿದ್ದರು.
ಇದಕ್ಕೆ ತಕ್ಕ ಉತ್ತರ ನೀಡಿರುವ ಭಾರತೀಯ ಪ್ರತಿನಿಧಿ ಸ್ನೇಹಾ, ಪಾಕಿಸ್ತಾನ ಭಯೋತ್ಪಾದಕರನ್ನು ಆಶ್ರಯಿಸುವ, ಅವರಿಗೆ ಹಣಕಾಸು ನೆರವಾಗುವ ಹಾಗೂ ಸಕ್ರಿಯವಾಗಿ ಬೆಂಬಲ ನೀಡುವ ನೀತಿಯನ್ನು ಹೊಂದಿದೆ ಎಂಬುವುದು ಜಾಗತಿಕ ಸದಸ್ಯ ರಾಷ್ಟ್ರಗಳಿಗೆ ತಿಳಿದಿರುವ ಸಂಗತಿಯಾಗಿದೆ. ಆದರೂ ನನ್ನ ದೇಶದ ವಿರುದ್ಧ ದುರುದ್ದೇಶಪೂರಿತ ಪ್ರಚಾರವನ್ನು ಮಾಡುತ್ತಲೇ ಇದ್ದಾರೆ ಜಮ್ಮು ಕಾಶ್ಮೀರ ಹಾಗೂ ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಪ್ರದೇಶಗಳನ್ನು ಇದು ಒಳಗೊಂಡಿದೆ. ಪಾಕಿಸ್ತಾನ ತಾನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳಿಂದ ತಕ್ಷಣವೇ ಹಿಂದೆ ಹೋಗಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದರು.