ಅಮೇರಿಕಾ, ಸೆ.25 (DaijiworldNews/PY): ಇಂಡೋ-ಪೆಸಿಫಿಕ್ ಭದ್ರತೆಯ ಬಗ್ಗೆ ಅಮೇರಿಕಾದಲ್ಲಿ ಕ್ವಾಡ್ ಸಭೆಯ ಪ್ರಾರಂಭಕ್ಕೂ ಮುನ್ನ ಭಾರತ ಹಾಗೂ ಚೀನಾ ನಡುವೆ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ಸೇನಾ ಸಂಘರ್ಷದ ಬಗ್ಗೆ ವಾಕ್ಸಮರ ನಡೆದಿದೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಚೀನಾ ದೂಷಿಸಿದ್ದು, ಈ ಆರೋಪವನ್ನು ಭಾರತ ತಳ್ಳಿಹಾಕಿದೆ.
ಮೋದಿ ಸರ್ಕಾರ ಚೀನಾದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, "ನಾವು ಆ ರೀತಿಯಾದ ಹೇಳಿಕೆಗಳನ್ನು ತಿರಸ್ಕರಿಸುತ್ತೇವೆ. ಕಳೆದ ವರ್ಷ ಪೂರ್ವ ಲಡಾಖ್ನ ಎಲ್ಎಸಿಯಲ್ಲಿ ನಡೆದ ಬೆಳವಣಿಗೆಗಳುಗೆ ಸಂಬಂಧಪಟ್ಟಂತೆ ನಮ್ಮ ನಿಲುವು ಸ್ಪಷ್ಟ ಹಾಗೂ ಸ್ಥಿರವಾಗಿತ್ತು" ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
"ನಮ್ಮ ದ್ವಿಪಕ್ಷೀಯ ಒಪ್ಪಂದಗಳಿಗೆ ವಿರುದ್ದವಾಗಿ ಯಥಾಸ್ಥಿತಿ ಬದಲಿಸಲು ಚೀನಾದ ಕಡೆಯಿಂದ ನಡೆಯುತ್ತಿರುವ ಪ್ರಚೋದನಾಕಾರಿ ನಡವಳಿಕೆ ಹಾಗೂ ಏಕಪಕ್ಷೀಯ ಪ್ರಯತ್ನಗಳು ಶಾಂತಿ ಹಾಗೂ ನೆಮ್ಮದಿಯ ಗಂಭಿರ ಅಡಚಣೆಗೆ ಕಾರಣವಾಯಿತು. ದ್ವಿಪಕ್ಷೀಯ ಸಂಬಂಧಗಳ ಮೇಲೂ ಇದು ಪರಿಣಾಮ ಬೀರಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಭಾರತ ಹಾಗೂ ಚೀನಾ ಎಲ್ಎಸಿಯಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕಾಪಾಡಿಕೊಳ್ಳುವ ಸಹಕಾರಕ್ಕೆ ಸಂಬಂಧಪಟ್ಟಂತೆ ಒಪ್ಪಂದಗಳಿಗೆ ಸಹಿ ಹಾಕಿದ್ದು, ಗಡಿ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವಲ್ಲಿ ಈ ಒಪ್ಪಂದಗಳು ಪ್ರಮುಖವಾಗಿವೆ" ಎಂದಿದ್ದಾರೆ.
"ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಭಾರತ ಎರಡು ದೇಶಗಳ ನಡುವಿನ ಒಪ್ಪಂದವನ್ನು ಉಲ್ಲಂಘಿಸಿದ್ದೇ ಕಾರಣ. ಭಾರತವು ಅಕ್ರಮವಾಗಿ ಎಲ್ಎಸಿ ದಾಟಿದ್ದು ಚೀನಾದ ಪ್ರದೇಶವನ್ನು ಆಕ್ರಮಿಸಿತ್ತು" ಎಂದು ಹೇಳಿದ್ದಾರೆ.
"ಭಾರತವು, ಉಭಯ ದೇಶಗಳು ಮಾಡಿದ ಒಪ್ಪಂದಗಳಿಗೆ ಬದ್ದವಾಗಿರಬೇಕು. ಅಲ್ಲದೇ, ಗಡಿ ಪ್ರದೆಶದಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗದುಕೊಳ್ಳಬೇಕು ಎಂದು ಚೀನಾ ನಿರೀಕ್ಷಿಸುತ್ತದೆ" ಎಂದಿದ್ದಾರೆ.