ಕಾಬೂಲ್, ಸೆ 28 (DaijiworldNews/MS): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಎಲ್ಲೆ ಮೀರಿದ್ದು, ಇದೀಗ ಮಗುವನ್ನು ಗಲ್ಲಿಗೇರಿಸುವ ಮೂಲಕ ತಮ್ಮ ಕ್ರೂರ ವರ್ತನೆಯನ್ನು ಮತ್ತೊಮ್ಮೆ ಹೊರಗೆಡವಿದ್ದಾರೆ.
ಮಗುವಿನ ತಂದೆ ಪಂಜ್ ಶೀರ್ ನ ಅಫ್ಘಾನ್ ಪ್ರತಿರೋಧ ಪಡೆಯಲ್ಲಿ ನಾಯಕನಾಗಿದ್ದಾನೆ ಎಂಬ ಅನುಮಾನದಿಂದ ತಾಲಿಬಾನಿಗಳು ಈ ನೀಚಕೃತ್ಯ ಎಸಗಿದ್ದಾರೆ.
ಸ್ಥಳೀಯ, ಸ್ವತಂತ್ರ ಮಾಧ್ಯಮ ಪಂಜಶಿರ್ ಅಬ್ಸರ್ವರ್ ಈ ವರದಿ ಮಾಡಿದ್ದು, ಯಾರು ತಾಲಿಬಾನ್ ವಿರುದ್ಧ ಧ್ವನಿ ಎತ್ತುತ್ತಾರೋ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ತಾಲಿಬಾನ್ ಇಂತಹ ಕ್ರೂರ ಕೃತ್ಯಕ್ಕೆ ಮುಂದಾಗುತ್ತಿದೆ ಎಂದು ತಿಳಿಸಿದೆ.
ಪಂಜಶಿರ್ ಅಬ್ಸರ್ವರ್ ಮಾಡಿದ ಟ್ವೀಟ್ ನಲ್ಲಿ , ಕ್ತದ ಮಡುವಿನಲ್ಲಿ ಮಗುವೊಂದು ನೆಲದ ಮೇಲೆ ಬಿದ್ದಿರುವ ವಿಡಿಯೋವನ್ನು ಇದ್ದು ಆ ಮಗುವಿನ ಸುತ್ತ ನಿಂತಿರುವ ಹಲವು ಮಕ್ಕಳು ದೊಡ್ಡದಾಗಿ ಅಳುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮಾತ್ರವಲ್ಲದೆ ಈ ಮಗುವಿನ ತಂದೆ ಪ್ರತಿರೋಧ ಪಡೆಯ ನಾಯಕ ಎಂಬ ಅನುಮಾನದ ಮೇರೆಗೆ ಪುಟ್ಟ ಮಗುವಿಗೆ ಶಿಕ್ಷೆ ನೀಡಲಾಗಿದೆ ಎಂದು ಪಂಜಶಿರ್ ಅಬ್ಸರ್ವರ್ ಟ್ವೀಟ್ನಲ್ಲಿ ಹೇಳಿದೆ.
ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ನಾವು ಬದಲಾಗಿದ್ದೇವೆ ಯಾವುದೇ ಸೇಡು ಹತ್ಯೆಗಳಿಲ್ಲ ಅಂತರಾಷ್ಟ್ರೀಯ ಮಟ್ಟದ ದೇಶಗಳ ನಾಯಕರನ್ನು ಸೆಳೆಯಲು ಹೇಳಿಕೆ ನೀಡುತ್ತಲೇ ಹಿಂಸಾಚಾರದಲ್ಲಿ ತೊಡಗಿದೆ.