ಕಾಬೂಲ್, ಅ.04 (DaijiworldNews/PY): ಕಾಬೂಲ್ ನಗರದಲ್ಲಿನ ಶಂಕಿತ ಐಸಿಸ್ ಉಗ್ರರ ಅಡಗುತಾಣದ ಮೇಲೆ ತಾಲಿಬಾನ್ ಪಡೆಗಳು ದಾಳಿ ನಡೆಸಿ, ಹಲವು ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಸೋಮವಾರ ತಾಲಿಬಾನ್ ಸರ್ಕಾರ ಹೇಳಿದೆ.
ಭಾನುವಾರ ಈದ್ಗಾ ಮಸೀದಿಯ ಹೊರಭಾಗದಲ್ಲಿ ಬಾಂಬ್ ದಾಳಿ ನಡೆದಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಐಎಸ್ ಅಡಗುತಾಣಗಳ ಮೇಲೆ ಸೇನಾಪಡೆಗಳು ದಾಳಿ ಮಾಡಿವೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಲು ತಾಲಿಬಾನ್ ಅಧಿಕಾರಿಗಳು ಮಸೀದಿಯಲ್ಲಿ ಸೇರಿದ್ದರು. ಈ ವೇಳೆ ಮಸೀದಿಯ ಹೊರಭಾಗದಲ್ಲಿ ಬಾಂಬ್ ದಾಳಿ ನಡೆದಿತ್ತು. ಬಾಂಬ್ ದಾಳಿಯ ಪರಿಣಾಮ ಐದು ಮಂದಿ ಸಾವನ್ನಪ್ಪಿದ್ದಾರೆ. ದಾಳಿಯ ಹೊಣೆಯಲ್ಲಿ ಯಾರೂ ಹೊತ್ತುಕೊಂಡಿರಲಿಲ್ಲ. ಆದರೆ, ಇದು ಐಸಿಸ್ ಉಗ್ರರ ಗುಂಪಿನದ್ದೇ ಕಾರ್ಯ ಎಂದು ಅನುಮಾನ ವ್ಯಕ್ತವಾಗಿದ್ದು, ತಾಲಿಬಾನ್ ಪಡೆಗಳು ಕಾರ್ಯಾಚರಣೆ ನಡೆಸಿವೆ.
"ಕಾಬೂಲ್ನ ಉತ್ತರ ಭಾಗದ ಖಾರಿ ಖಾನಾ ಪ್ರದೇಶದಲ್ಲಿದ್ದ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಅಡಗುತಾಣಗಳ ಮೇಲೆ ತಾಲಿಬಾನ್ ದಾಳಿ ನಡೆಸಿದ್ದು, ಐಸಿಸ್ ಕೇಂದ್ರ ಸಂಪೂರ್ಣ ನಾಶವಾಗಿದೆ. ಅಡಗುತಾಣದಲ್ಲಿದ್ದ ಎಲ್ಲಾ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ" ಎಂದು ಮುಜಾಹಿದ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಶಂಕಿತ ಐಸಿಸ್ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ನಾಗರಿಕರು ಹಾಗೂ ತಾಲಿಬಾನ್ ಸದಸ್ಯರೂ ಸೇರಿದ್ದಾರೆ" ಎಂದು ತಾಲಿಬಾನ್ ಸರ್ಕಾರದ ಸಂಸ್ಕೃತಿ ಆಯೋಗದ ಅಧಿಕಾರಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದೆ.