ಕರಾಚಿ, ಅ 08 (DaijiworldNews/MS): ಪಾಕಿಸ್ತಾನದ ನೈರುತ್ಯ ಪ್ರಾಂತ್ಯದ ಬಲೂಚಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ತಂಡಗಳು ಅವಶೇಷಗಳನ್ನು ತೆರವುಗೊಳಿಸಲು ಮತ್ತು ಪ್ರದೇಶಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿವೆ.
ಭೂಕಂಪದ ಪರಿಣಾಮ 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಮುಂಜಾನೆ 3.30ಕ್ಕೆ ಈ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ಮ್ಯಾಗ್ನಿಟ್ಯೂಡ್ ತೀವ್ರತೆ ದಾಖಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಮಾಹಿತಿಯ ಪ್ರಕಾರ, ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಪೂರ್ವಕ್ಕೆ 100 ಕಿಮೀ (60 ಮೈಲಿ) ಪೂರ್ವದಲ್ಲಿರುವ ಹರ್ನಾಯ್ ಜಿಲ್ಲೆಯಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನವು ಸುಮಾರು 20 ಕಿಲೋಮೀಟರ್ (12 ಮೈಲಿ) ಆಳದಲ್ಲಿ ನಡೆಯಿತು.
ಬೆಳಗಿನ ಜಾವ ಎಲ್ಲರೂ ನಿದ್ರೆ ಮಾಡುತ್ತಿರುವಾಗ ಭೂಕಂಪ ಉಂಟಾಗಿರುವುದರಿಂದ ಬಹುತೇಕರಿಗೆ ತಕ್ಷಣ ಮನೆಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಭೂಕಂಪದ ತೀವ್ರತೆಯನ್ನು ಗಮನಿಸಿದರೆ ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.