ನ್ಯೂಯಾರ್ಕ್, ಅ.07 (DaijiworldNews/PY): ಮಕ್ಕಳಿಗೆ ಮೊಟ್ಟ ಮೊದಲ ಮಲೇರಿಯಾ ಲಸಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.
ಸಾಂದರ್ಭಿಕ ಚಿತ್ರ
"ಬ್ರಿಟಿಷ್ ಔಷಧ ತಯಾರಕ ಗ್ಲಾಕ್ಸೊಸ್ಮಿತ್ ಕ್ಲೈನ್ ಅಭಿವೃದ್ದಿಪಡಿಸಿದ ಆರ್ಟಿಎಸ್, ಎಸ್/ಎಎಸ್01 ಮಲೇರಿಯಾ ಅಥವಾ ಮಾಸ್ಕ್ಯುರಿಕ್ಸ್ ಅನ್ನು ಮಕ್ಕಳಿಗೆ ನೀಡಲು ಶಿಫಾರಸು ಮಾಡಲಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಟೆಡ್ರೋಸ್ ಅದನೋಮ್ ಗೆಬ್ರೆಯಾಸಿಸ್ ಮಾಹಿತಿ ನೀಡಿದ್ದಾರೆ.
ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಬುಧವಾರ ಅನುಮೋದನೆ ನೀಡಿದ್ದು, "ಮೊದಲ ಲಸಿಕೆಯನ್ನು ಆಫ್ರಿಕಾದಾದ್ಯಂತ ಮಕ್ಕಳಿಗೆ ನೀಡುವಂತೆ ಆಗ್ರಹಿಸಿದೆ. ಸುರಕ್ಷಿತವಾದ ಮಲೇರಿಯಾ ಲಸಿಕೆ ಸಿದ್ದವಾಗಿದೆ. ಪರಿಣಾಮಕಾರಿಯೂ ಹಾಗೂ ವಿತರಣೆಗೆ ಸಜ್ಜಾಗಿಯೂ ಇರುವುದು ಐತಿಹಾಸಿಕ ಘಟನೆಯಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಮಲೇರಿಯಾ ಕಾರ್ಯಕ್ರಮದ ನಿರ್ದೇಶಕ ಡಾ.ಪೆಡ್ರೊ ಅಲಾನ್ಸೊ ತಿಳಿಸಿದ್ದಾರೆ.
ಈ ಬಗ್ಗೆ ಟೆಡ್ರೊಸ್ ಟ್ವೀಟ್ ಮಾಡಿದ್ದು, "ಮಲೇರಿಯಾ ಸಂಶೋಧಕನಾಗಿ ನಾನು ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದೆ. ಈ ಕಾಯಿಲೆಯ ವಿರುದ್ದ ನಾವು ಪರಿಣಾಮಕಾರಿ ಲಸಿಕೆ ಪಡೆಯುವ ದಿನಕ್ಕಾಗಿ ನಿರೀಕ್ಷಿಸುತ್ತಿದ್ದೇವೆ. ಇಂದು ಆ ದಿನ ಬಂದಿದೆ" ಎಂದಿದ್ದಾರೆ.
"ಸೋಂಕು ಹಾಗೂ ಬ್ಯಾಕ್ಟೀರಿಯಾಗಳ ವಿರುದ್ದ ಹಲವು ಲಸಿಕೆಗಳು ಅಸ್ತಿತ್ವದಲ್ಲಿವೆ. ಆದರೆ, ಮಲೇರಿಯಾದ ವಿರುದ್ದ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಯನ್ನು ವ್ಯಾಪಕವಾಗಿ ಬಳಕೆ ಮಾಡಲು ಶಿಫಾರಸು ಮಾಡಿದ್ದು ಇದೇ ಮೊದಲ ಬಾರಿ" ಎಂದು ಹೇಳಿದ್ದಾರೆ.
ಅಮೇರಿಕಾದಲ್ಲಿ ಪ್ರತಿ ವರ್ಷ ಸುಮಾರು 2,000 ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಹೆಚ್ಚಿನವು ಹೊರ ರಾಷ್ಟ್ರಗಳಿಂದ ಬಂದಿರುವವವರಲ್ಲಿ ಕಾಣಿಸಿಕೊಂಡಿದೆ.
ಕೀನ್ಯಾ ಸೇರಿದಂತೆ ಘಾನಾ, ಮಲಾವಿಯಲ್ಲಿ ನಡೆಯುತ್ತಿರುವ ಲಸಿಕೆಯ ಆರಂಭಿಕ ಕಾರ್ಯಕ್ರಮದ ಫಲಿತಾಂಶಗಳ ಆಧಾರದ ಮೇಲೆ ಲಸಿಕೆಗೆ ಶಿಫಾರಸು ಮಾಡಲಾಗಿದೆ. 2019ರಿಂದ ಸುಮಾರು 8,00,000 ಮಕ್ಕಳನ್ನು ಪ್ರಯೋಗದಲ್ಲಿ ಒಳಪಡಿಸಲಾಗಿದೆ.
"ಔಷಧ ತಯಾರಕ ಸಂಸ್ಥೆ ಜಿಎಸ್ಕೆ ವಾರ್ಷಿಕವಾಗಿ 2028ರವರೆಗೆ 15 ಮಿಲಿಯನ್ ಡೋಸ್ ಮಾಸ್ಕ್ಯುರಿಕ್ಸ್ ಲಸಿಕೆ ಉತ್ಪಾದನೆ ಮಾಡಲು ಬದ್ದ" ಎಂದು ಹೇಳಿದೆ.
"ಮಕ್ಕಳಿಗೆ ಐದು ತಿಂಗಳಿನಿಂದ ಆರ್ಟಿಎಸ್, ಎಸ್/ಎಎಸ್01 ಮಲೇರಿಯಾ ಲಸಿಕೆಯನ್ನು ನಾಲ್ಕು ಡೋಸ್ಗಳಲ್ಲಿ ನೀಡಬೇಕಾಗುತ್ತದೆ. ಇದು ಮಲೇರಿಯಾ ನಿರ್ಮೂಲನೆಯಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.