ನವದೆಹಲಿ, ಅ 08 (DaijiworldNews/MS): ಕೋವಿಶೀಲ್ಡ್ ಅಥವಾ ಯಾವುದೇ ಯುಕೆ ಅನುಮೋದಿತ ಲಸಿಕೆ ಪಡೆದಿರುವ, ಬ್ರಿಟನ್ಗೆ ಆಗಮಿಸುವ ಭಾರತದ ಪ್ರಯಾಣಿಕರಿಗೆ ಅಕ್ಟೋಬರ್ 11 ರಿಂದ ಕಡ್ಡಾಯ ಕ್ವಾರಂಟೈನ್ನಿಂದ ವಿನಾಯತಿ ಇರಲಿದೆ ಎಂದು ಭಾರತಕ್ಕೆ ಹೈಕಮಿಷನರ್ ಗುರುವಾರ ಹೇಳಿದೆ.
ಬ್ರಿಟಿಷ್ ಸರ್ಕಾರದ 'ತಾರತಮ್ಯ'ದ ಪ್ರಯಾಣದ ನಿಯಮಗಳಿಗೆ ಪ್ರತಿಕ್ರಿಯೆಯ ಭಾಗವಾಗಿ ಭಾರತವು ಇಂಗ್ಲೆಂಡ್ನಿಂದ ಆಗಮಿಸುವವರಿಗೆ 10 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಿದ ಸುಮಾರು ಒಂದು ವಾರದ ನಂತರ, ಬ್ರಿಟಿಷ್ ಸರ್ಕಾರ ತನ್ನ ಪಟ್ಟು ಸಡಿಲಿಸಿದ್ದು, ಲಂಡನ್ನಲ್ಲಿರುವ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ಭಾರತದಲ್ಲಿ ಎರಡು ಡೋಸ್ ಲಸಿಕೆ ಪಡೆದ ಕೋವಿಶೀಲ್ಡ್ ಪ್ರಮಾಣಪತ್ರವನ್ನು ಪರಿಗಣಿಸಲು ಒಪ್ಪಿಕೊಂಡಿದೆ.
ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಪ್ರಯಾಣಿಕರು ಇಂಗ್ಲೆಂಡ್ ಆಗಮಿಸುವುದು ಮತ್ತು ಇಂಗ್ಲೆಂಡ್ ನಿಂದ ಅಲ್ಲಿಗೆ ತೆರಳುವುದನ್ನು ನಿರ್ಬಂಧಿಸಿತ್ತು. ಇದೀಗ ಇಂಗ್ಲೆಂಡ್ ಸರ್ಕಾರವು ಇಂಗ್ಲೆಂಡಿಗೆ ಬರುವ ಮತ್ತು ಅಲ್ಲಿಂದ ತೆರಳುವವರ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಬ್ರಿಟಿಷ್ ಸರ್ಕಾರದ ಪ್ರಯಾಣ ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳು ಅ. 11, ಬೆಳಿಗ್ಗೆ 9:30 ರಿಂದ ಜಾರಿಗೆ ಬರಲಿದೆ.
"ಅಕ್ಟೋಬರ್ 11 ರಿಂದ ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದಿರುವ ಬ್ರಿಟನ್ ಆಗಮಿಸುವ ಭಾರತ ಪ್ರಯಾಣಿಕರಿಗೆ ಯಾವುದೇ ನಿರ್ಬಂಧವಿಲ್ಲ, . ಕಳೆದ ತಿಂಗಳು ನೀಡಿದ ನಿಕಟ ಸಹಕಾರಕ್ಕಾಗಿ ಭಾರತೀಯ ಸರ್ಕಾರಕ್ಕೆ ಧನ್ಯವಾದಗಳು" ಎಂದು ಭಾರತಕ್ಕೆ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಗುರುವಾರ ಟ್ವೀಟ್ ಮಾಡಿದ್ದಾರೆ.