ಪ್ಯಾಂಗ್ಯಾಂಗ್, ಅ.12 (DaijiworldNews/HR): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನ ಆಡಳಿತ, ಹಣಕ್ಕಾಗಿ ನಡೆಸುವ ಕೃತ್ಯ ಹಾಗೂ ಹತ್ಯೆಗಳು ಸೇರಿದಂತೆ ಅನೇಕ ಪ್ರಮುಖ ವಿಚಾರಗಳನ್ನು ಅಲ್ಲಿನ ಸೇನಾ ಕಮಾಂಡರ್ ಒಬ್ಬರು ಬಹಿರಂಗಪಡಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿರುವ ಅವರು, "ಕಿಮ್ ಜಾಂಗ್ನ ಆದೇಶದ ಮೇರೆಗೆ ನಾವು ಆಡಳಿತದ ಅನೇಕ ರಹಸ್ಯಗಳನ್ನು ಸೋರಿಕೆಯಾಗದಂತೆ ರಕ್ಷಿಸಿದ್ದು, ಕೊಲೆಗಳ ಮೇಲೆ ಕೊಲೆಗಳನ್ನು ಮಾಡಿದ್ದೇವೆ, ಹಣಕ್ಕಾಗಿ ಅಕ್ರಮ ಮಾದಕದ್ರವ್ಯಗಳ ಪ್ರಯೋಗಾಲಯಗಳನ್ನೇ ತೆರೆದಿದ್ದೇವೆ. ಸರ್ವಾಧಿಕಾರಿ ಕಿಮ್ಗೆ ಯಾವ ಮೂಲದಿಂದ, ಹೇಗಾದರೂ ಸರಿಯೇ ಹಣವೊಂದು ಬಂದರೆ ಸಾಕು ಎಂಬ ಯೋಚನೆಯಿದೆ. ಅದಕ್ಕಾಗಿ ಆತ ಏನು ಮಾಡಲಿಕ್ಕೂ ಎದರುವುದಿಲ್ಲ" ಎಂದಿದ್ದಾರೆ.
ಇನ್ನು ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಅಕ್ರಮ ಡ್ರಗ್ಗಳ ತಯಾರಿಕೆ ಮತ್ತು ಮಾರಾಟ, ನಕಲಿ ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟ, ವನ್ಯಜೀವಿಗಳ ಕಳ್ಳಸಾಗಣೆ, ನಕಲಿ ನೋಟು ಮುದ್ರಣ, ಭಯೋತ್ಪಾದನೆಯಂಥ ಚಟುವಟಿಕೆಗಳನ್ನು ಹಣಕ್ಕಾಗಿ ನಡೆಸಲಾಗುತ್ತಿದೆ ಎಂದೂ ಸೇನಾ ಕಮಾಂಡರ್ ತಿಳಿಸಿದ್ದಾರೆ.