ವಾಷಿಂಗ್ಟನ್, ಅ.15 (DaijiworldNews/PY): ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಲ್ ಕ್ಲಿಂಟನ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಲ್ ಕ್ಲಿಂಟನ್ ಅವರ ವಕ್ತಾರ ಏಂಜೆಲ್, "ಬಿಲ್ ಕ್ಲಿಂಟನ್ ಅವರು ಗುರುವಾರ ಸಂಜೆ ಯುಸಿಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ಬಿಲ್ ಕ್ಲಿಂಟನ್ ಅವರು ಅಮೇರಿಕಾದ 42ನೇ ಅಧ್ಯಕ್ಷರಾಗಿ 1993ರಿಂದ 2001ರವರೆಗೆ ಕಾರ್ಯನಿರ್ವಹಿಸಿದ್ದರು.