ಢಾಕಾ,ಅ 15 (DaijiworldNews/MS): ಚಿತ್ತಗಾಂಗ್ ವಿಭಾಗದ ಕುಮಿಲಾ ಸೇರಿದಂತೆ ಹಲವು ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಮತ್ತು ದುರ್ಗಾ ಪೂಜಾ ಪೆಂಡಾಲ್ ಗಳ ಮೇಲೆ ದಾಳಿ ನಡೆಸಿ ವಿಧ್ವಂಸಕ ಕೃತ್ಯ ಎಸಗಿದ ಘಟನೆಯಲ್ಲಿ ಶಾಮೀಲಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಲಾಗುವುದು ಎಚ್ಚರಿಕೆಯನ್ನು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ನೀಡಿದ್ದಾರೆ.
ಹಿಂಸಾಚಾರದ ಹಿಂದೆ ಇರುವ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಕುಮಿಲಾದಲ್ಲಿನ ಘಟನೆಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವುದು ಖಂಡಿತಾ ಎಂದು ಹೇಳಿದ್ದಾರೆ.
ಢಾಕಾದಲ್ಲಿರುವ ಢಾಕೇಶ್ವರಿ ನ್ಯಾಶನಲ್ ಟೆಂಪಲ್ ನಲ್ಲಿ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಹಿಂದೂ ಸಮುದಾಯದವರಿಗೆ ಶುಭಾಶಯ ಕೋರಿದ ಸಂದರ್ಭದಲ್ಲಿ ಶೇಖ್ ಹಸೀನಾ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಶೇಖ್ ಹಸೀನಾ, ಕೊಮಿಲ್ಲಾದಲ್ಲಿ ದೇವಸ್ಥಾನಗಳನ್ನು ಒಡೆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ನಮಗೆ ದೊಡ್ಡ ಪ್ರಮಾಣದ ಮಾಹಿತಿ ಲಭ್ಯವಾಗಿದೆ. ನಾವು ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇದು ತಂತ್ರಜ್ಞಾನದ ಯುಗವಾಗಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ತಂತ್ರಜ್ಞಾನದ ಬಳಕೆಯಿಂದ ಖಂಡಿತವಾಗಿ ಪತ್ತೆ ಹಚ್ಚಲಾಗುವುದು . ಯಾರು ಈ ಘಟನೆಗೆ ಕಾರಣರಾಗಿದ್ದಾರೋ ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ಹೇಳಿದರು.