ವಾಷಿಂಗ್ಟನ್, ಅ.15 (DaijiworldNews/PY): ಅಮೇರಿಕಾ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಭಾರತೀಯ ಅಮೇರಿಕನ್ ರವಿ ಚೌಧರಿ ಅವರನ್ನು ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಘೋಷಣೆ ಮಾಡಿದ್ದಾರೆ.
ರವಿ ಚೌಧರಿ ಅವರು ಅಮೇರಿಕಾ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ಅವರನ್ನು ವಾಯುಪಡೆಯ ಇಂಧನ ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ. ಅಮೇರಿಕಾದ ಸೆನೆಟ್ನಿಂದ ದೃಢೀಕರಣ ಪಡೆದುಕೊಂಡ ಬಳಿಕ ಈ ಪ್ರಮುಖ ಹುದ್ದೆಯ ಅಧಿಕಾರವನ್ನು ರವಿ ಚೌಧರಿ ಅವರು ಸ್ವೀಕರಿಸಲಿದ್ದಾರೆ.
"ಈ ಹಿಂದೆ ರವಿ ಚೌಧರಿ ಅವರು ಅಮೇರಿಕಾದ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಚೌಧರಿ ಅವರು, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನಲ್ಲಿ ಕಮರ್ಷಿಯಲ್ ಸ್ಪೇಸ್ ಅಡ್ವಾನ್ಸ್ಡ್ ಪ್ರೋಗ್ರಾಮ್ ಹಾಗೂ ಇನ್ನೋವೇಷನ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು" ಎಂದು ಶ್ವೇತಭವನ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದೆ.