ಕೊಲಂಬೊ, ಅ.17 (DaijiworldNews/PY): ಕಚ್ಚಾ ತೈಲದ ಖರೀದಿಗಾಗಿ ಶ್ರೀಲಂಕಾ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೋರಿದೆ.
"ಭಾರತದಿಂದ ನೆರವು ಲಭ್ಯವಾದರೆ ಅದನ್ನು ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಮಾಡಲು ಬಳಸಿಕೊಳ್ಳಲಾಗುವುದು" ಎಂದು ಸಿಪಿಸಿ ಅಧ್ಯಕ್ಷ ಸುಮಿತ್ ವಿಜಯ ಸಿಂಘೆ ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ದೇಶದ ಎರಡು ಪ್ರಮುಖ ರಾಷ್ಟ್ರೀಯ ಬ್ಯಾಂಕ್ಗಳಾದ ಬ್ಯಾಂಕ್ ಆಫ್ ಸಿಲೋನ್ ಹಾಗೂ ಪೀಪಲ್ಸ್ ಬ್ಯಾಂಕ್ ಬಳಿ ಸುಮಾರು 3.3 ಬಿಲಿಯನ್ ಡಾಲರ್ ಬಾಕಿ ಉಳಿಸಿಕೊಂಡಿದೆ. ಕಚ್ಚಾತೈಲವನ್ನು ದೇಶದ ತೈಲ ವಿತರಕರು ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುತ್ತಿದ್ದು, ಸಿಂಗಾಪುರ ಸೇರಿದಂತೆ ಇತರ ಪ್ರದೇಶಗಳಿಂದ ಸಂಸ್ಕರಿಸಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
"ಶೀಘ್ರದಲ್ಲೇ ಭಾರತ-ಶ್ರೀಲಂಕಾದ ಇಂಧನ ಕಾರ್ಯದರ್ಶಿ ಸಾಲ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ" ಎಂದು ಹಣಕಾಸು ಕಾರ್ಯದರ್ಶಿ ಎಸ್ ಆರ್ ಅತ್ತಿಗಳೆ ತಿಳಿಸಿದ್ದಾರೆ.
"ಕೊರೊನಾದಿಂದ ದೇಶದ ಪ್ರವಾಸೋದ್ಯಮ ಹಾಗೂ ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದ ರಾಷ್ಟ್ರದ ಗಳಿಕೆಗೆ ಹೊಡೆತ ಬಿದ್ದಿದೆ. ಹಾಗಾಗಿ ಶ್ರೀಲಂಕಾ ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುತ್ತಿದೆ" ಎಂದು ಹಣಕಾಸು ಸಚಿವ ಬೆಸಿಲ್ ರಾಜಪಕ್ಸೆ ಕಳೆದ ತಿಂಗಳು ತಿಳಿಸಿದ್ದರು.