ವಾಷಿಂಗ್ಟನ್, ಅ.21 (DaijiworldNews/PY): ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಅಮೇರಿಕಾದಲ್ಲಿ ಮಾನವ ದೇಹದಲ್ಲಿ ಹಂದಿ ಮೂತ್ರಪಿಂಡ ಕಸಿ ಮಾಡಲಾಗಿದೆ.
ನ್ಯೂಯಾರ್ಕ್ ನಗರದ ಎನ್ವೈಯು ಲ್ಯಾಂಗೋನ್ ಆರೋಗ್ಯ ವೈದ್ಯಕೀಯ ಕೇಂದ್ರದ ಶಸ್ತ್ರಚಿಕಿತ್ಸಕರು ಈ ಸಾಧನೆ ಮಾಡಿದ್ದಾರೆ. ಕಸಿ ಮಾಡಿದ ಬಳಿಕ ಹಂದಿ ಮೂತ್ರಪಿಂಡವು ರೋಗಿಯ ದೇಹದಲ್ಲಿ ಸರಿಯಾಗಿ ಕೆಲಸ ಮಾಡುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ ವೈದ್ಯರ ಸಮಿತಿಯ ಮುಖ್ಯಸ್ಥ ಡಾ.ರಾಬರ್ಟ್ ಮಾಂಟ್ಗೊಮೆರಿ, ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿದ ರೋಗಿ ಆಸ್ಪತ್ರೆಗೆ ದಾಖಲಾದ ಸಂದರ್ಭ ದೀರ್ಘಕಾಲದವರೆಗೆ ರೋಗಿಯ ಮೆದುಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ, ಹೃದಯ ಹಾಗೂ ಇತರ ಅಂಗಗಳು ಕೆಲಸ ಮಾಡುತ್ತಿದ್ದವು. ಪರೀಕ್ಷೆ ಮಾಡಿದ ಬಳಿಕ ರೋಗಿಗೆ ಮೂತ್ರಪಿಂಡದ ಸಮಸ್ಯೆ ಕಂಡುಬಂದಿದೆ. ಶೀಘ್ರವೇ ರೋಗಿಯ ಕುಟುಂಬದ ಸದಸ್ಯರಿಂದ ಅನುಮತಿ ಪಡೆದು ಸುದೀರ್ಘ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ರೋಗಿಯ ದೇಹದ ಹೊರಗಿನ ದೊಡ್ಡ ಅಪಧಮನಿಗೆ ಹಂದಿಯ ಮೂತ್ರಪಿಂಡವನ್ನು ಸಂಪರ್ಕಿಸಿದ್ದಾರೆ.
ಇದಾದ ಬಳಿಕ 2-3 ದಿನಗಳವರೆಗೆ ವೈದ್ಯರು ರೋಗಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದ್ದಾರೆ. ರೋಗಿಯ ದೇಹ ಮೂತ್ರ ಪಿಂಡವನ್ನು ಸ್ವೀಕರಿಸಿದಾಗ ವೈದ್ಯರಿಗೆ ಆಶ್ಚರ್ಯವಾಗಿದೆ.
"ಕಸಿ ಮಾಡಿದ ಮೂತ್ರಪಿಂಡ ಸರಿಯಾಗಿ ಕೆಲಸ ಮಾಡುತ್ತಿದೆ. ಇದುವರೆಗಿನ ಎಲ್ಲಾ ಫಲಿತಾಂಶಗಳು ಉತ್ತಮವಾಗಿವೆ" ಎಂದು ಡಾ. ರಾಬರ್ಟ್ ಮಾಂಟ್ಗೊಮೆರಿ ತಿಳಿಸಿದ್ದಾರೆ.