ಬಾಂಗ್ಲಾದೇಶ, ಅ 22 (DaijiworldNews/MS): ಬಾಂಗ್ಲಾದೇಶದಲ್ಲಿ ಕೋಮು ಗಲಭೆಯಿಂದ ಉಂಟಾದ ಹಿಂಸಾಚಾರಕ್ಕೆ ಕಾರಣನಾದ ಪ್ರಮುಖ ಆರೋಪಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಕೊಮಿಲ್ಲಾ ಪ್ರದೇಶದ ನಾನುವ ದಿಘೀರ್ ದುರ್ಘಾ ಪೂಜೆ ಪೆಂಡಾಲ್ನಲ್ಲಿ ಆಂಜನೇಯ ಪ್ರತಿಮೆಯ ಹಿಂದೆ ಕುರಾನ್ ಅನ್ನು ಇಟ್ಟಿದ್ದ ಇಕ್ಬಾಲ್ ಹುಸೇನ್ (35)ನನ್ನು ಕಾಕ್ಸ್ ಬಝಾರ್ ನ ಶುಗಂಧಾ ಬೀಚ್ ಪ್ರದೇಶದಿಂದ ಬಂಧಿಸಲಾಯಿತು ಎಂದು ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿರುವುದಾಘಿ ವರದಿಯಾಗಿದೆ.
35 ವರ್ಷದ ಹೊಸೈನ್, ಕೊಮಿಲ್ಲಾದ ಸುಹಾನಗರ ಪ್ರದೇಶದವನಾಗಿದ್ದು, ಅಕ್ಟೋಬರ್ 13 ರಂದು ದುರ್ಗಾ ಪೂಜಾ ಪಂದಲ್ ಒಂದರಲ್ಲಿ ಪವಿತ್ರ ಕುರ್ಆನ್ ಅನ್ನು ಇರಿಸಿದ್ದ, ಇದು ಹಿಂಸಾಚಾರಕ್ಕೆ ಕಾರಣವಾಗಿ ಕನಿಷ್ಠ ಮೂವರನ್ನು ಬಲಿ ತೆಗೆದುಕೊಂಡಿತ್ತು. ಹಲವಾರು ಮಂದಿ ಗಾಯಗೊಂಡಿದ್ದರು. ದುಷ್ಕರ್ಮಿಗಳು ದುರ್ಗಾ ಪೂಜೆಯ ಪೆಂಡಾಲ್ ಅನ್ನು ಧ್ವಂಸ ಮಾಡಿದ್ದರು. ಚಂದಪುರ್, ಹಜಿಗಾಂಜ್, ಚಟ್ಟೋಗ್ರಾಮ್ಸ್, ಕಾಕ್ಸ್ ಬಝಾರ್ ಪೆಕುವಾ, ರಂಗ್ಪುರನ ಪ್ರಿಗಂಜ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೋಮು ಗಲಭೆ ನಡೆದಿತ್ತು. ದುರ್ಗಾ ಪೂಜಾ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳಿಂದ ಪೊಲೀಸರು ಗಂಟೆಗಟ್ಟಲೆ ವಿಡಿಯೋ ತುಣುಕನ್ನು ವಿಶ್ಲೇಷಿಸಿದ ನಂತರ ವ್ಯಕ್ತಿಯನ್ನು ಗುರುತಿಸಲಾಗಿತ್ತು.
ಪೆಂಡಾಲ್ ಹೊರಗಡೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಇಕ್ಬಾಲ್ ಹುಸೇನ್ನ್ನು ಆರೋಪಿ ಎಂದು ಗುರುತಿಸಿದ್ದಾರೆ. ಆರೋಪಿ ನಿಧಾನವಾಗಿ ಬಂದು ದುರ್ಗಾ ಪೂಜೆಗಾಗಿ ಹಾಕಲಾಗಿದ್ದ ಪೆಂಡಾಲ್ನಲ್ಲಿದ್ದ ಆಂಜನೇಯ ಪ್ರತಿಮೆಯ ಹಿಂಭಾಗದಲ್ಲಿ ಪವಿತ್ರ ಕುರಾನ್ ಪುಸ್ತಕವನ್ನು ಅಡಗಿಸಿಟ್ಟು, ಮತ್ತೆ ಏನು ಆಗಿಲ್ಲ ಎಂಬಂತೆ ನಡೆದು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.