ಲಾಸ್ಏಂಜಲಿಸ್, ಅ.23 (DaijiworldNews/PY): ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಲಿಫೋರ್ನಿಯಾದ ಭಾರತೀಯ ಮೂಲದ ಮಹಿಳಾ ಟೆಕ್ಕಿ ಹಾಗೂ ಮತ್ತೋರ್ವ ವಿದೇಶಿ ಪ್ರವಾಸಿಗ ಸಾವನ್ನಪ್ಪಿದ್ದ ಘಟನೆ ಮೆಕ್ಸಿಕೊದ ರೆಸಾರ್ಟ್ನಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೃತ ಭಾರತೀಯ ಮೂಲ ಟೆಕ್ಕಿಯನ್ನು ಅಂಜಲಿ ರ್ಯೋತ್(25) ಎಂದು ಗುರುತಿಸಲಾಗಿದೆ. ಮತ್ತೋರ್ವ ಜರ್ಮನಿಯ ಪ್ರವಾಸಿಗ.
ಎರಡು ಗುಂಪುಗಳ ನಡುವೆ ಕೆರಿಬಿಯನ್ ಕರಾವಳಿಯ ಟುಲುಮ್ನಲ್ಲಿರುವ ರೆಸಾರ್ಟ್ನ ಲಾ ಮಾಲ್ಕ್ಯುರಿಡಾ ರೆಸ್ಟೊರೆಂಟ್ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅಂಜಲಿ ರ್ಯೋತ್ ಅ.22ರಂದು ಜನ್ಮದಿನ ಆಚರಿಸಿಕೊಳ್ಳಲು ಈ ರೆಸಾರ್ಟ್ಗೆ ಬಂದಿದ್ದರು. ಅಂಜಲಿ ಹಾಗೂ ಇತರ ನಾಲ್ವರು ವಿದೇಶಿ ಪ್ರವಾಸಿಗರು ಬುಧವಾರ ರಾತ್ರಿ 10.30ರ ಸುಮಾರಿಗೆ ರೆಸ್ಟೊರೆಂಟ್ನ ಮಹಡಿಯಲ್ಲಿ ಊಟ ಮಾಡುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ನಾಲ್ಕು ಮಂದಿ ಶಸ್ತ್ರಧಾರಿ ವ್ಯಕ್ತಿಗಳು, ಇವರ ಟೇಬಲ್ ಪಕ್ಕದಲ್ಲೇ ಕುಳಿತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭ ಗುರಿ ತಪ್ಪಿದ ಗುಂಡು ಪಕ್ಕದಲ್ಲಿದ್ದ ವಿದೇಶಿ ಪ್ರವಾಸಿಗರಿಗೆ ಹೊಡೆದಿದೆ. ಇದರ ಪರಿಣಾಮ ಅಂಜಲಿ ಹಾಗೂ ಜರ್ಮನಿಯ ಪ್ರವಾಸಿಯೋರ್ವರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಅಂಜಲಿ ಅವರು ಪ್ರವಾಸಿ ಬ್ಲಾಗರ್ ಆಗಿದ್ದು, ಭಾರತದ ಹಿಮಾಚಲ ಪ್ರದೇಶದವರು. ಇವರು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ನೆಲೆಸಿದ್ದರು. ಜುಲೈನಿಂದ ಲಿಂಕ್ಡ್ಇನ್ ಕಂಪೆನಿಯಲ್ಲಿ ಸೀನಿಯರ್ ಸೈಟ್ ರಿಲಿಯಬಲಿಟಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.