ಮಾಲಿ, ಅ 24 (DaijiworldNews/MS): ಮಾಲಿಯಾ 26 ವರ್ಷದ ಮಹಿಳೆಯೊಬ್ಬರು ಒಂದೇ ಬಾರಿಗೆ ಒಂಬತ್ತು ಶಿಶುಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಬರೆದಿದ್ದಾರೆ. ಹೌದು ಹಲೀಮಾ ಸಿಸ್ಸೆ ಹೆಸರಿನ ಮಹಿಳೆ ಮೇ ತಿಂಗಳಿನಲ್ಲಿ ಒಂದೇ ಬಾರಿಗೆ ಒಂಬತ್ತು ಮಕ್ಕಳಿಗೆ ಜನ್ಮವಿತ್ತು ಮಹಾತಾಯಿ ಎಂದೆಣಿಸಿಕೊಂಡಿದ್ದಾರೆ.
ಮೊರಕ್ಕೋದ ಕಾಸಾಬ್ಲಾಂಕಾದಲ್ಲಿರುವ ಐನ್ ಬೋರ್ಜಾ ಕ್ಲಿನಿಕ್ನಲ್ಲಿ ಸಿಸ್ಸೆಗೆ ಹೆರಿಗೆ ಮಾಡಿಸಲಾಗಿದೆ. ಇದೀಗ ಹಲೀಮಾ ಸಿಸ್ಸೆ ತನ್ನ ಅನುಭವವನ್ನು ತೆರೆದಿಟ್ಟಿದ್ದಾರೆ.
ನಿಜಕ್ಕೂ ನಾನು ವೈದ್ಯಕೀಯ ತಂಡಕ್ಕೆ ಮತ್ತು ಮಾಲಿ ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಮೊದಲಿಗೆ ನಮಗೆ ಏಳು ಮಕ್ಕಳಿಗೆ ಜನ್ಮ ನೀಡುವ ನಿರೀಕ್ಷೆ ಇತ್ತು. ಆದರೆ ಮಾಲಿಯಿಂದ ಮೊರೊಕ್ಕೋಗೆ ಸಿ-ಸೆಕ್ಷನ್ಗಾಗಿ ಕರೆ ತಂದ ಬಳಿಕ ಒಂಬತ್ತು ಮಕ್ಕಳೊಂದಿಗೆ ಹೆರಿಗೆಯಾಗಿದೆ ಈ ವೇಳೆ, ಆ ಮಕ್ಕಳನ್ನೆಲ್ಲ ನೋಡಿಕೊಳ್ಳುವವರು ಯಾರೆಂದು ನನಗೆ ತೋಚುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೇ ತಿಂಗಳಿನಲ್ಲಿ ಹೆರಿಗೆಯಾದರೂ ಕೆಲ ತಿಂಗಳುಗಳು ಮಕ್ಕಳು ಐಸಿಯುನಲ್ಲಿಯೇ ಇದ್ದು ಕಳೆಯಬೇಕಾಗಿ ಬಂದಿತ್ತು. ಆಗಸ್ಟ್ನಲ್ಲಿ ಈ ಮಕ್ಕಳನ್ನು ಇನ್ಕ್ಯೂಬೇಟರ್ಗಳಿಂದ ಹೊರತೆಗೆಯಲಾಗಿದ್ದರೂ, ವೈದ್ಯರು ಇನ್ನೂ ಇವುಗಳ ಶುಶ್ರೂಷೆ ಮಾಡುತ್ತಿದ್ದಾರೆ. ಸಿಸ್ಸೆ ಕುಟುಂಬವು ಆಸ್ಪತ್ರೆ ಬಳಿಯ ಮನೆಯೊಂದರಲ್ಲಿ ವಾಸಿಸುತ್ತಿದೆ. ತನ್ನೆಲ್ಲಾ ಮಕ್ಕಳಿಗೆ ದಿನವೊಂದಕ್ಕೆ ಆರು ಲೀಟರ್ ಹಾಲುಣಿಸುವ ಸಿಸ್ಸೆ, ಒಂದೇ ದಿನದಲ್ಲಿ 100 ಡೈಪರ್ಗಳನ್ನು ಬದಲಿಸಬೇಕಾಗಿ ಬರುತ್ತದೆ ಎಂದು ಹೇಳುತ್ತಾರೆ. ಆರಂಭದಲ್ಲಿ ಮಕ್ಕಳ ಪಾಲನೆಯಿಂದ ದಣಿಯುತ್ತಿದ್ದ ಸಿಸ್ಸೆ ಇದೀಗ ನಿಧಾನವಾಗಿ ಇದಕ್ಕೆಲ್ಲಾ ಒಗ್ಗಿಕೊಳ್ಳುತ್ತಿದ್ದಾರೆ.
ಸಿಸ್ಸೆಯ ಆಸ್ಪತ್ರೆ ವೆಚ್ಚ ಒಂದು ದಶಲಕ್ಷ ಪೌಂಡ್ (10.3 ಕೋಟಿ ರೂ.ಗಳು) ತಲುಪಿದ್ದು, ಈ ಖರ್ಚನ್ನು ಮಾಲಿಯನ್ ಸರ್ಕಾರ ನೋಡಿಕೊಳ್ಳುತ್ತದೆ.