ಟೊರೆಂಟೊ, ಅ 27(DaijiworldNews/MS): ಭಾರತೀಯ ಮೂಲದ ಕೆನಡಾದ ಪ್ರಜೆ, ರಾಜಕಾರಣಿ ಅನಿತಾ ಆನಂದ್ ಅವರು ಕೆನಡಾದ ನೂತನ ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದಾರೆ.
ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸಂಪುಟ ಪುನಾರಚನೆಯ ಭಾಗವಾಗಿ 54 ವರ್ಷದ ಅನಿತಾ ಆನಂದ್ ಅತ್ಯಂತ ಮಹತ್ವದ ಖಾತೆಯಾದ ರಕ್ಷಣೆಯ ಹೊಣೆ ಹೊತ್ತಿದ್ದಾರೆ.ಇಷ್ಟು ದೊಡ್ಡ ಜವಾಬ್ದಾರಿಯನ್ನು ಹೊತ್ತ ಭಾರತೀಯ ಮೂಲದ ಎರಡನೇ ಮಹಿಳೆ ಎಂಬ ಗೌರವಕ್ಕೆ ಅನಿತಾ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಕೋವಿಡ್ ಅಬ್ಬರದ ದಿನಗಳಲ್ಲಿ ಅನಿತಾ ಪ್ರೊಕ್ಯೂರ್ ಮೆಂಟ್ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಚಿವೆಯಾಗಿ ದೇಶಕ್ಕೆ ಅತ್ಯಗತ್ಯವಾದ ಲಸಿಕೆ ಸಂಗ್ರಹಿಸಿ ಜನತೆಗೆ ವಿತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮಿಲಿಟರಿ ಲೈಂಗಿಕ ದುರ್ವರ್ತನೆ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ದೀರ್ಘಾವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಭಾರತೀಯ ಮೂಲದ ಹರ್ಜಿತ್ ಸಜ್ಜನ್ ಅವರ ನಂತರ ಸಂಪುಟ ಪುನಾರಚನೆಯಲ್ಲಿ ಅನಿತಾ ನೇಮಕವಾಗಿದ್ದಾರೆ . ಸಜ್ಜನ್ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಯ ಸಚಿವರನ್ನಾಗಿ ನೇಮಿಸಲಾಗಿದೆ.