ನ್ಯೂಯಾರ್ಕ್, ಅ.28 (DaijiworldNews/PY): ವಿಮಾನ ನಿಲ್ದಾಣದಲ್ಲಿ ಮೂರು ತಿಂಗಳ ಕಾಲ ಕಳೆದು ಹೋಗಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಅಮೇರಿಕಾ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಆರೋಪದಿಂದ ಮುಕ್ತಗೊಳಿಸಿದೆ.
ಭಾರತದ ಆದಿತ್ಯ ಸಿಂಗ್ ಅವರು ಪದವಿ ಪಡೆಯಲು ಅಮೇರಿಕಾಕ್ಕೆ ಬಂದಿದ್ದರು. ಪದವಿ ಮುಗಿದ ಬಳಿಕ ಅವರು 2020ರ ಅಕ್ಟೋಬರ್ 19ರಂದು ತಮ್ಮ ತಾಯ್ನಾಡಿಗೆ ಮರಳಲು ಲಾಸ್ ಏಂಜಲೀಸ್ನಿಂದ ಚಿಕಾಗೋಗೆ ತೆರಳಿದ್ದರು. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಆತಂಕಪಡುವಂತಾಗಿತ್ತು. ಮೂರು ತಿಂಗಳ ಕಾಲ ಆದಿತ್ಯ ಸಿಣಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಬಚ್ಚಿಟ್ಟುಕೊಂಡಿದ್ದರು. ಇವರು ಕಾಣೆಯಾಗಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ನೀಡುತ್ತಿದ್ದ ಆಹಾರ ಪಡೆದು. ಅವರು ನೀಡುತ್ತಿದ್ದ ಹಣದಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಜೀವನ ನಡೆಸಿದ್ದಾರೆ. ಭದ್ರತೆ ಹಾಗೂ ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿ ಸಿಬ್ಬಂದಿಗಳಿಗೆ ಕಾಣಿಸಿಕೊಂಡಲ್ಲಿ ಗುರುತಿನ ದಾಖಲೆಗಳನ್ನು ತೋರಿಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆದಿತ್ಯ ಸಿಂಗ್ ಶೌಚಾಲಯ, ಸ್ನಾನದ ಗೃಹ ಸೇರಿದಂತೆ ಹಲವು ಸ್ಥಳಗಳಲ್ಲಿ ಅಡಗಿರುತ್ತಿದ್ದರು. ಜನವರಿ 16ರಂದು ಇವರನ್ನು ಪೊಲೀಸರು ಬಂಧಿಸಿದ್ದರು.
ಆದಿತ್ಯ ಸಿಂಗ್ ಅವರನ್ನು ವಿಚಾರಣೆ ನಡೆಸಿದ ಸಂದರ್ಭ ಬಂಧಿತನಿಗೆ ಯಾವುದೇ ಅಪರಾಧಗಳ ಹಿನ್ನೆಲೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಪ್ರಯಾಣಿಕನಂತೆ ಆದಿತ್ಯ ಸಿಂಗ್ ಕೂಡಾ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಆತನಲ್ಲಿ ಅತಿಕ್ರಮಣದ ಉದ್ದೇಶ ಇರಲಿಲ್ಲ. ದಿ ಟರ್ಮಿನಲ್ ಎನ್ನುವ ಚಲನಚಿತ್ರವನ್ನು ಹೋಲುವ ಆದಿತ್ಯ ಸಿಂಗ್ನ ಪ್ರಕರಣದಲ್ಲಿ ನ್ಯಾಯಾಧೀಶ ಆಡ್ರಿನೇ ಡೇವಿಸ್ ಗಂಭೀರ ಆರೋಪದಿಂದ ಖುಲಾಸೆಗೊಳಿಸಿದ್ದಾರೆ. ಆದರೆ, ಅಕ್ರಮ ವಲಸೆ ಆರೋಪ ಮುಂದುವರಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ವಿಮಾನ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ಆದಿತ್ಯ ಸಿಂಗ್ ಆಗ್ನೇಯ ಲಾಸ್ಏಂಜಲೀಸ್ನಲ್ಲಿ ಓರ್ವ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದ. ಅಲ್ಲಿನ ವ್ಯಕ್ತಿ, ತಮ್ಮ ವಯಸ್ಸಾಗಿರುವ ತಂದೆಯನ್ನು ನೋಡಿಕೊಂಡರೆ ವಾಸಿಸಲು ಜಾಗ ಹಾಗೂ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಆ ಸಂದರ್ಭ ಆದಿತ್ಯ ಸಿಂಗ್ ಅವರ ವೀಸಾ ಅವಧಿ ಮುಗಿದು ಹೋಗಿತ್ತು. 2020ರ ಅಕ್ಟೋಬರ್ನಲ್ಲಿ ಭಾರತಕ್ಕೆ ತೆರಳಿ ತಾಯಿಯನ್ನು ಭೇಟಿ ಮಾಡುವ ಆದಿತ್ಯ ಸಿಂಗ್ ಅವರ ಉದ್ದೇಶ ಕೊರೊನಾ ಕಾರಣದಿಂದ ವಿಫಲವಾಗಿತ್ತು.