ಬಾಂಗ್ಲಾದೇಶ, ಅ.29 (DaijiworldNews/PY): "ಬಾಂಗ್ಲಾದೇಶದಲ್ಲಿ ಇತ್ತೀಚಿನ ಕೋಮುಗಲಭೆಗಳಲ್ಲಿ ಯಾರೊಬ್ಬರ ಮೇಲೂ ಅತ್ಯಾಚಾರ ನಡೆದಿಲ್ಲ ಹಾಗೂ ಒಂದೇ ಒಂದು ಹಿಂದೂ ದೇಗುಲ ಧ್ವಂಸವಾಗಿಲ್ಲ" ಎಂದು ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್ ಮೊಮೆನ್ ಅವರು ಬಾಂಗ್ಲಾದೇಶದಲ್ಲಿನ ಇತ್ತೀಚಿನ ಹಿಂಸಾಚಾರಗಳ ಕುರಿತು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
"ಇತ್ತೀಚಿನ ಹಿಂಸಾಚಾರದಲ್ಲಿ ಕೇವಲ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 4 ಮಂದಿ ಮುಸ್ಲಿಮರು, 2 ಹಿಂದೂಗಳಾಗಿದ್ದು, ಇವರೆಲ್ಲರೂ ಪೊಲೀಸರ ಎನ್ಕೌಂಟರ್ಗೆ ಹತರಾದವರು" ಎಂದು ಎ.ಕೆ.ಅಬ್ದುಲ್ ಮೊಮೆನ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
"ಇಬ್ಬರು ಹಿಂದೂಗಳಲ್ಲಿ ಒಬ್ಬರದ್ದು ಸಹ ಸಾವಾಗಿದ್ದರೆ, ಇನ್ನೊಬ್ಬರು ಕೊಳಕ್ಕೆ ನೆಗೆದು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಹಿಂಸಾಚಾರದ ಸಂದರ್ಭ ಅತ್ಯಾಚಾರಗಳು ನಡೆದಿಲ್ಲ. ದೇವಾಲಯಗಳೂ ಕೂಡಾ ಧ್ವಂಸವಾಗಿಲ್ಲ. ಆದರೆ, ದೇವಾಲಯಗಳಲ್ಲಿದ್ದ ವಿಗ್ರಹಗಳು ಭಗ್ನಗೊಂಡಿವೆ. ಕೂಡಲೇ, ಸರ್ಕಾರ ಕ್ರಮ ತೆಗೆದುಕೊಂಡಿದೆ" ಎಂದಿದ್ದಾರೆ.
"ಘಟನೆಯಲ್ಲಿ 20 ಮನೆಗಳನ್ನು ಸುಟ್ಟಹಾಕಲಾಗಿದೆ. ಈಗ ಅವುಗಳನ್ನು ಮರುನಿರ್ಮಾಣ ಮಾಡಲಾಗಿದೆ. ಎಲ್ಲರಿಗೂ ಕೂಡಾ ಪರಿಹಾರ ದೊರಕಿದೆ. ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ದುಷ್ಕರ್ಮಿಗಳನ್ನು ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
"ಬಾಂಗ್ಲಾದೇಶದ ಪ್ರತಿ ಪ್ರದೇಶಗಳಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಪೂಜಾ ಮಂಟಪಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಅವುಗಳಿಗೆ ಹಣ ಪಾವತಿಸುತ್ತದೆ" ಎಂದಿದ್ದಾರೆ.