ವಿಶ್ವಸಂಸ್ಥೆ, ಅ.29 (DaijiworldNews/PY): "ಉತ್ತಮ ಗುಣಮಟ್ಟದ ಕೊರೊನಾ ಲಸಿಕೆಗಳನ್ನು ತಯಾರಿ ಮಾಡುತ್ತಿರುವ ಭಾರತೀಯ ಉದ್ಯಮದಲ್ಲಿ ನಮಗೆ ವಿಶ್ವಾಸವಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೋರ್ವರು, "ಡಬ್ಲ್ಯುಎಚ್ಒಗೆ ಕೋವ್ಯಾಕ್ಸಿನ್ ತಯಾರಕ ಸಂಸ್ಥೆಯಾದ ಭಾರತ್ ಬಯೋಟೆಕ್ ನಿಯಮಿತವಾಗಿ ಹಾಗೂ ತ್ವರಿತವಾಗಿ ಮಾಹಿತಿಗಳನ್ನು ನೀಡುತ್ತಿದೆ" ಎಂದು ತಿಳಿಸಿದ್ದಾರೆ.
"ತಾಂತ್ರಿಕಾ ಸಲಹಾ ಸಮಿತಿ ಉತ್ಪಾದಕ ಸಂಸ್ಥೆಯಿಂದ ಹೆಚ್ಚುವರಿ ಸ್ಪಷ್ಟನೆ ಪಡೆದುಕೊಳ್ಳಲು ತೀರ್ಮಾನಿಸಿದೆ. ಈ ಬಗ್ಗೆ ವಾರಾಂತ್ಯದ ವೇಳೆಗೆ ವಿವರ ಸಿಗಬಹುದು. ಸಮಿತಿ ನ.3ರಂದು ಮತ್ತೆ ಸಭೆ ಸೇರಲಿದೆ" ಎಂದು ಹೇಳಿದೆ.
ಡಬ್ಲ್ಯುಎಚ್ಒದ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳ ವಿಭಾಗದ ಸಹಾಯಕ ಮಹಾನಿರ್ದೇಶಕಿ ಡಾ. ಮರಿಯಾಂಜಿಲಾ ಸಿಮಾವೊ ಅವರು ಲಸಿಕೆಯ ತರ್ತು ಬಳಕೆಗೆ ಮಾನ್ಯತೆ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ್ದು, "ತಾಂತ್ರಿಕ ತಂಡಕ್ಕೆ ಸಲ್ಲಿಸುವ ಸಲುವಾಗಿ ಹೆಚ್ಚಿನ ಮಾಹಿತಿಯ ಅಗತ್ಯವಿದೆ. ನಾವು ಭಾರತ್ ಬಯೋಟೆಕ್ನೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ಸಭೆಗಳು ನಡೆಯುತ್ತಿವೆ" ಎಂದಿದ್ದಾರೆ.