ವಿಶ್ವಸಂಸ್ಥೆ, ಅ.30 (DaijiworldNews/PY): ಅಫ್ಗಾನಿಸ್ತಾನದ ನಾಗರಿಕರು ಎದುರಿಸುತ್ತಿರುವ ಸಾಮೂಹಿಕ ಆಹಾರದ ಬಿಕ್ಕಟ್ಟನ್ನು ತಡೆಯಲು ಸಂಘಟಿತ ಯತ್ನ ನಡೆಸುವಂತೆ ಜಿ20 ಶೃಂಗಸಭೆಯ ನಾಯಕರನ್ನು ವಿಶ್ವಸಂಸ್ಥೆಯ ಮಾನವೀಯ ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿಕ್ಸ್ ಒತ್ತಾಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಅಫ್ಗಾನ್ನಲ್ಲಿ ಅರ್ಧದಷ್ಟು ಮಕ್ಕಳು ತೀವ್ರವಾದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಪ್ರತೀ ಪ್ರಾಂತ್ಯದಲ್ಲಿಯೂ ದಡಾರ ರೋಗ ಉಲ್ಬಣವಾಗಿದೆ" ಎಂದಿದ್ದಾರೆ.
"ಅಫ್ಗಾನ್ನಲ್ಲಿ ಆರ್ಥಿಕತೆಯೂ ಕೂಡಾ ಕುಸಿಯುತ್ತಿದೆ. ಅಲ್ಲಿನ ಅರ್ಧದಷ್ಟು ಮಂದಿ ತಿನ್ನಲೂ ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಅಫ್ಗಾನ್ನ ಮಂದಿ ಮೂಲಭೂತ ಅಗತ್ಯಗಳಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಆಹಾರ ಅಭದ್ರತೆ ಅಪೌಷ್ಟಿಕತೆಗೆ ಕಾರಣಾಗುತ್ತದೆ. ಇದರಿಂದ ರೋಗ ಹಾಗೂ ಸಾವು ಕೂಡಾ ಸಂಭವಿಸಬಹುದು. ಇದನ್ನು ಶೀಘ್ರವೇ ಸರಿಪಡಿಸಬೇಕು" ಎಂದಿದ್ದಾರೆ.
"ಅಫ್ಗಾನ್ಗೆ ಆರ್ಥಿಕ ನೆರವು ಒದಗಿಸಲು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರಿಗೆ ತಿಳಿಸುತ್ತೇನೆ" ಎಂದು ಹೇಳಿದ್ದಾರೆ.