ಹೂಸ್ಟನ್, ನ.06 (DaijiworldNews/HR): ಆಸ್ಟ್ರೋವರ್ಲ್ಡ್ ಸಂಗೀತ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಭವಿಸಿದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಅನೇಕ ಜನರು ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಹೂಸ್ಟನ್ ಅಗ್ನಿಶಾಮಕ ದಳದ ಮುಖ್ಯಸ್ಥ ಸ್ಯಾಮ್ಯುಯೆಲ್ ಪೆನಾ, ಶುಕ್ರವಾರ ರಾತ್ರಿ 9:15 ರ ಸುಮಾರಿಗೆ ಪ್ರೇಕ್ಷಕರು ವೇದಿಕೆಯ ಮುಂಭಾಗದ ಕಡೆಗೆ ಹೋಗಲು ಪ್ರಾರಂಭಿಸಿದಾಗ ನೂಕು ನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದ್ದು,ಇದರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ.
ಇನ್ನು ರ್ಯಾಪರ್ ಟ್ರಾವಿಸ್ ಸ್ಕಾಟ್ ಅವರ ಸೆಟ್ನಲ್ಲಿ ಜನಸಂದಣಿ ಹೆಚ್ಚಾದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೂಸ್ಟನ್ ಕ್ರಾನಿಕಲ್ ಹೇಳಿದೆ.
ಎರಡು ದಿನಗಳ ಈ ಸಂಗೀತ ಉತ್ಸವಕ್ಕೆ 50,000 ಜನರು ಆಗಮಿಸಿದ್ದು, ಕಾಲ್ತುಳಿತದ ಬಳಿಕ ಎರಡನೇ ದಿನದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.