ಬ್ರೆಜಿಲ್, ನ 06 (DaijiworldNews/MS): ಬ್ರೆಜಿಲ್ನಲ್ಲಿ ಶುಕ್ರವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಖ್ಯಾತ ಗಾಯಕಿ, ಗ್ರ್ಯಾಮಿ ಪ್ರಶಸ್ತಿ ವಿಜೇತೆ, ಮರಿಲಿಯಾ ಮೆಂಡೊಂಕೊ ಮೃತಪಟ್ಟಿದ್ದಾರೆ.
ಮೆಂಡೋನ್ಕಾ ಅವರ ಪತ್ರಿಕಾ ಕಚೇರಿ ಹೇಳಿಕೆಯಲ್ಲಿ ಗಾಯಕಿ ಮರಿಲಿಯಾ ಮೆಂಡೋನ್ಕಾ ಅವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಮಿನಾಸ್ ಗೆರೈಸ್ ರಾಜ್ಯದಲ್ಲಿ ಪತನಗೊಂಡ ಪರಿಣಾಮ ಅವರ ನಿರ್ಮಾಪಕ ಹೆನ್ರಿಕ್ ರಿಬೇರೊ, ಸಹಾಯಕ ಅಬಿಸಿಯೆಲಿ ಸಿಲ್ವೇರಾ ಡಯಾಸ್ ಫಿಲ್ಹೋ ಮತ್ತು ವಿಮಾನದ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಘಟನೆಗೆ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿದಿಲ್ಲ. ಆದರೆ ಟವರ್ ಒಂದಕ್ಕೆ ವಿಮಾನದ ರೆಕ್ಕೆ ತಾಗಿದ ಪರಿಣಾಮ ಜಲಪಾತಕ್ಕೆ ಬಿದ್ದು, ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಇವಾನ್ ಲೂಪ್ಸ್ ತಿಳಿಸಿದ್ದಾರೆ.
26 ವರ್ಷದ ಮರಿಲಿಯಾ ಮೆಂಡೊಕೊ ಅವರು 2019 ರಲ್ಲಿ ಪ್ರತಿಷ್ಟಿತ ಲ್ಯಾಟಿನ್ ಗ್ರ್ಯಾಮಿ ಪ್ರಶಸ್ತಿಯನ್ನು 'sertanejo' ಎಂಬ ಆಲ್ಬಮ್ ಹಾಡುಗಳಿಗೆ ಪಡೆದಿದ್ದರು. ಅಲ್ಲದೇ 'ಹಾಟೆಸ್ಟ್' ಗಾಯಕಿ ಎಂಬ ಬಿರುದನ್ನು ಪಡೆದುಕೊಂಡಿದ್ದರು. ಮರಿಲಿಯಾ ಮೆಂಡೋನ್ಕಾ ಬ್ರೆಜಿಲಿಯನ್ ಹಳ್ಳಿಗಾಡಿನ ಸಂಗೀತ ಶೈಲಿಯ "ಸೆರ್ಟಾನೆಜೊ" ನ ಐಕಾನ್ ಆಗಿ ಖ್ಯಾತಿಗೆ ಪಡೆದಿದ್ದರು.
ಶುಕ್ರವಾರದಂದು ವಿಮಾನ ಹತ್ತುವ ವಿಡಿಯೋವನ್ನು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.