ಬರ್ಮಿಂಗ್ಹ್ಯಾಮ್, ನ 10 (DaijiworldNews/MS): ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ. ಮಂಗಳವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹವಾಗಿರುವ ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿಕೊಂಡಿದ್ದಾರೆ.
" ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟೆದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ಹ್ಯಾಮ್ನಲ್ಲಿರುವ ಮನೆಯಲ್ಲಿ ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣದಲ್ಲಿ ನಾವು ಜೊತೆಯಾಗಿ ನಡೆಯಲು ಬಯಸಿದ್ದೇವೆ" ಎಂದು ಮಲಾಲ ಬರೆದಿದ್ದಾರೆ. ಈ ಪೋಸ್ಟ್ನ ಹೊರತಾಗಿ, ಮಲಾಲಾ ಅವರು ನಿಕಾಹ್ ಸಮಾರಂಭದ ನಾಲ್ಕು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ".
ಬ್ರಿಟನ್ನಲ್ಲಿ ವಾಸಿಸುವ 24 ವರ್ಷದ ಮಲಾಲಾ ತನ್ನ ಗಂಡನ ಮೊದಲ ಹೆಸರನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಇಂಟರ್ನೆಟ್ ಬಳಕೆದಾರರು ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ-ಪರ್ಫಾರ್ಮೆನ್ಸ್ ಸೆಂಟರ್ನ ಜನರಲ್ ಮ್ಯಾನೇಜರ್ ಅಸರ್ ಮಲಿಕ್ ಎಂದು ಗುರುತಿಸಿದ್ದಾರೆ.
'ಮಲಾಲ ಯೂಸಫ್ ಝಾಯಿ' ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ 'ಸ್ವಾತ್ ಜಿಲ್ಲೆ'ಯ ಮಿಂಗೋರಗ್ರಾಮದವರಾಗಿದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ 'ಸ್ವಾತ್ ಕಣಿವೆ'ಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟ ಮಾಡಿ ಹೆಸರುವಾಸಿಯಾಗಿದ್ದಾರೆ.
2012 ರ 9 ಅಕ್ಟೋಬರ್ 2012 ರಂದು ಮಲಾಲಾ ಶಾಲಾ ಬಸ್ನಲ್ಲಿ ಮನೆಗೆ ಹಿಂದಿರುಗುತ್ತಿರುವಾಗ, ತಾಲಿಬಾನ್ ಬಂದೂಕುಧಾರಿಗಳು ಗುಂಡಿನ ದಾಳಿಗೈದು ಆಕೆಯ ಹತ್ಯೆಗೆ ಯತ್ನಿಸಿದ್ದರು.