ವಾಷಿಂಗ್ಟನ್, ನ.10 (DaijiworldNews/PY): ಟಿಕ್ಟಾಕ್ನಲ್ಲಿ ರಕ್ಷಣೆಗಾಗಿ ಬಳಸುತ್ತಿದ್ದ ಕೈಸನ್ನೆಯನ್ನು ಬಳಸಿ ಬಾಲಕಿ ತನ್ನ ಜೀವ ಉಳಿಸಿಕೊಂಡ ಘಟನೆ ಫ್ರಾಂಕ್ಫರ್ಟ್ನ ಕೆಂಟುಕಿಯಲ್ಲಿ ನಡೆದಿದೆ.
ಕೆಂಟುಕಿಯಲ್ಲಿ 16 ವರ್ಷದ ಬಾಲಕಿಯು ಹಿರಿಯ ವ್ಯಕ್ತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಳು. ಈ ಸಂದರ್ಭ ಆಕೆ ಟಿಕ್ಟಾಕ್ನಲ್ಲಿ ಕಲಿತ ಕೈ ಸನ್ನೆಯನ್ನು ಬಳಸಿಕೊಂಡಿ ಸಹಾಯ ಕೇಳಿದ್ದಾಳೆ. ಈಕೆಯ ಕೈಸನ್ನೆಯನ್ನು ಗಮನಿಸಿದ ವಾಹನ ಚಾಲಕನೊಬ್ಬ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ವಾಹನ ಚಾಲಕನಿಗೆ ಬಾಲಕಿಯ ಕೈಸನ್ನೆ ಅರ್ಥವಾದ ಕೂಡಲೇ ಅವರು 911ಕ್ಕೆ ಕರೆ ಮಾಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಬಾಲಕಿಯನ್ನು ಅಪಹರಿಸುತ್ತಿದ್ದ 61 ವರ್ಷದ ಜೇಮ್ಸ್ ಹರ್ಬರ್ಟ್ ಬ್ರಿಕ್ನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಕೆರೊಲಿನಾದಲ್ಲಿ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದರು.
ಚಾಲಕ ಜೇಮ್ಸ್ ಬಾಲಕಿಯನ್ನು ಉತ್ತರ ಕೆರೊಲಿನಾ, ಕೆಂಟುಕಿ ಹಾಗೂ ಓಹಿಯೋಗಳಲ್ಲಿ ಸುತ್ತಾಡಿಸಿದ್ದು, ಇಬ್ಬರು ಅಲ್ಲಿಂದ ಸಂಬಂಧಿಕರೊಂದಿಗೆ ಉಳಿದುಕೊಂಡಿದ್ದಾರೆ. ಆತ ಮೋಸ ಮಾಡಿ ಬಾಲಕಿಯನ್ನು ಕರೆದುಕೊಂಡು ಬಂದಿದ್ದಾನೆ ಎಂದು ಸಂಬಂಧಿಕರಿಗೆ ತಿಳಿದ ಕೂಡಲೇ ಅಲ್ಲಿಂ ಇಬ್ಬರು ಹೊರಟು ಹೋಗಿದ್ದಾರೆ. ಬಳಿಕ ಬಾಲಕಿ ಕೆಂಟುಕಿನಲ್ಲಿ ಹ್ಯಾಂಡ್ ಸಿಗ್ನಲ್ ಬಳಸಿ ತನ್ನನ್ನು ರಕ್ಷಿಸಿಕೊಂಡಿದ್ದಾಳೆ.
ಕೆನಡಾದ ಮಹಿಳಾ ಫೌಂಡೇಶನ್ ಕಳೆದ ವರ್ಷ ಮೊದಲು ಬಾರಿಗೆ ಈ ಹ್ಯಾಂಡ್ ಸಿಗ್ನಲ್ ಅನ್ನು ಪರಿಚಯಿಸಿತ್ತು. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಜನರು ಮನೆಯಲ್ಲಿ ಹಾಗೂ ಬೇರೆಡೆ ಸಂಭವನೀಯ ತೊಂದರೆಗಳ ಕುರಿತು ಇತರರನ್ನು ಎಚ್ಚರಿಸುವುದು ಇದರ ಉದ್ದೇಶವಾಗಿದೆ.