ಮೆಲ್ಬೋರ್ನ್, ನ.15 (DaijiworldNews/PY): ಭಾರತ ಸರ್ಕಾರ ಉಡುಗೊರೆಯಾಗಿ ನೀಡಿದ್ದ ಹಾಗೂ ಇತ್ತೀಚೆಗೆ ಅನಾವರಣಗೊಂಡಿದ್ದ ಮಹಾತ್ಮ ಗಾಂಧಿ ಅವರ ಬೃಹತ್ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, "ಇದು ಅವಮಾನಕರ" ಎಂದು ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.
"ಇದು ಭಾರತೀಯ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಆಘಾತ ಹಾಗೂ ನಿರಾಶೆಯನ್ನು ಉಂಟು ಮಾಡಿದೆ" ಎಂದಿದ್ದಾರೆ.
"ಪ್ರಧಾನ ಮಂತ್ರಿ ಮಾರಿಸನ್ ಅವರು ಭಾರತದ ಕಾನ್ಸುಲ್ ಜನರಲ್ ರಾಜ್ ಕುಮಾರ್ ಹಾಗೂ ಇತರ ಆಸ್ಟ್ರೇಲಿಯಾದ ನಾಯಕರೊಂದಿಗೆ ಭಾರತದ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯಾದ ಭಾರತೀಯ ಸಮುದಾಯ ಕೇಂದ್ರದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ" ಎಂದು ವರದಿ ತಿಳಿಸಿದೆ.
"ಈ ರೀತಿಯಾದ ಅಗೌರವವನ್ನು ನೋಡುವುದು ಅವಮಾನಕರ ಹಾಗೂ ಅತ್ಯಂತ ನಿರಾಶಾದಾಯಕ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ವಿಶ್ವದ ಯಶಸ್ವಿ ಬಹುಸಂಸ್ಕೃತಿ ಹಾಗೂ ವಲಸೆ ರಾಷ್ಟ್ರವಾಗಿರುವ ದೇಶದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲಾದ ದಾಳಿಯನ್ನು ಖಂಡಿತವಾಗಿಯೂ ಸಹಿಸಲಾಗದು" ಎಂದಿದ್ದಾರೆ.
"ಶುಕ್ರವಾರ ಸಂಜೆ 5.30 ರಿಂದ ಶನಿವಾರ ಸಂಜೆ 5.30 ರ ನಡುವೆ ಕಿಡಿಗೇಡಿಗಳು ಪ್ರತಿಮೆಯ ಶಿರಚ್ಛೇದ ಮಾಡಲು ವಿದ್ಯುತ್ ಉಪಕರಣವನ್ನು ಬಳಸಿದ್ದಾರೆ" ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ತಿಳಿಸಿದೆ.
ಈ ಪ್ರತಿಮೆಯನ್ನು ಭಾರತ ಸರ್ಕಾರ ಉಡುಗೊರೆಯಾಗಿ ನೀಡಿತ್ತು.