ಪಾಕಿಸ್ತಾನ, ನ.18 (DaijiworldNews/HR): ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ತನ್ನದೇ ಮಕ್ಕಳನ್ನು 50,000 ರೂ.ಗಳಿಗೆ ಮಾರಾಟ ಮಾಡಲು ಮುಂದಾದ ಪೊಲೀಸಪ್ಪನ ವಿಡಿಯೋವೊಂದು ವೈರಲ್ ಆಗಿದೆ.
ಕಾರಾಗೃಹ ಇಲಾಖೆಯ ನಿಸಾರ್ ಲಶರಿ ಎಂಬ ಹೆಸರಿನ ಈ ಪೇದೆ ಬೀದಿಯೊಂದರ ಮಧ್ಯದಲ್ಲಿ ನಿಂತುಕೊಂಡು ತನ್ನಿಬ್ಬರು ಮಕ್ಕಳನ್ನು ಹಿಡಿದುಕೊಂಡು 50,000 ರೂ.ಗಳಿಗೆ ಮಾರುತ್ತಿರುವುದಾಗಿ ಕೂಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇನ್ನು ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಲಶರಿಗೆ ರಜೆಯ ಅಗತ್ಯವಿತ್ತು. ಆದರೆ ರಜೆ ಬೇಕೆಂದರೆ ಲಂಚ ಕೊಡಬೇಕೆಂದು ಲಂಚ ನೀಡಲು ಲಶರಿಗೆ ಮೇಲಧಿಕಾರಿ ಬೇಡಿಕೆ ಇಟ್ಟಿದ್ದರು. ಅವರಿಗೆ ಲಂಚ ನೀಡಲು ಸಾಧ್ಯವಾಗದೇ ಇದ್ದಾಗ, ಲಶರಿಯ ರಜೆಯ ಅರ್ಜಿ ರದ್ದು ಮಾಡಲಾಗಿದೆ. ಜೊತೆಗೆ ನಗರದಿಂದ 120 ಕಿಮೀ ದೂರದಲ್ಲಿರುವ ಲರ್ಕಾನಾ ಎಂಬ ಊರಿಗೆ ವರ್ಗಾವಣೆ ಮಾಡಲಾಗಿದೆ.
"ನಾನು ಬಹಳ ಬಡವನಾಗಿದ್ದು, ಕರಾಚಿಗೆ ಪ್ರಯಾಣಿಸಿ, ಕಾರಾಗೃಹ ಇಲಾಖೆಯ ಐಜಿಗೆ ದೂರು ನೀಡಲು ಸಹ ಆಗುತ್ತಿಲ್ಲ. ಇಲ್ಲಿನ ಶಕ್ತಿಶಾಲಿ ಜನರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ ಮಗುವಿನ ಚಿಕಿತ್ಸೆಗಾಗಿ ಲಂಚ ನೀಡಬೇಕಾಗಿತ್ತೇ? ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗೆ ಕೊಂಡೊಯ್ಯಬೇಕಿತ್ತೇ?" ಎಂದು ಪೇದೆ ಅಸಹಾಯಕರಾಗಿ ಹೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.