ವಾಷಿಂಗ್ಟನ್, ನ.20 (DaijiworldNews/PY): "ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಅನಾರೋಗ್ಯದ ಹಿನ್ನೆಲೆ ಶ್ವೇತಭವನ ವೈದ್ಯರಿಂದ ವಾಡಿಕೆಯ ತಪಾಸಣೆಗೆ ಒಳಗಾದರು. ಈ ಸಂದರ್ಭ ಅವರ ಅಧ್ಯಕ್ಷೀಯ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ವರ್ಗಾಯಿಸಲಾಯಿತು" ಎಂದು ಶ್ವೇತಭವನ ತಿಳಿಸಿದೆ.
"ಬಿಡನ್ ಅವರಿಗೆ ಅರಿವಳಿಕೆಗೆ ಒಳಗಾದಾಗ ಅಲ್ವಾವಧಿಗೆ ಉಪಾಧ್ಯಕ್ಷರಿಗೆ ಅಧಿಕಾರವನ್ನು ವರ್ಗಾಯಿಸಲಾಯಿತು" ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಾಕ್ಸಿ ಹೇಳಿದ್ದಾರೆ.
"ಈ ಸಮಯದಲ್ಲಿ ಉಪಾಧ್ಯಕ್ಷರು ವೆಸ್ಟ್ ವಿಂಗ್ನಲ್ಲಿರುವ ಅವರ ಕಚೇರಿಯಿಂದ ಕೆಲಸ ಮಾಡುತ್ತಾರೆ" ಎಂದಿದ್ದಾರೆ.
ಯುಎಸ್ ಸಂವಿಧಾನದ ಪ್ರಕಾರ, ಸೆನೆಟ್ನ ಅಧ್ಯಕ್ಷ ಪ್ರೊ ಟೆಂಪೋರ್ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಅವರಿಗೆ ಅಧ್ಯಕ್ಷ ಬಿಡೆನ್ ಅವರು ಈ ಬಗ್ಗೆ ತಿಳಿಸಬೇಕಾಗುತ್ತದೆ. ಚಿಕಿತ್ಸೆ ಒಳಪಡುತ್ತಿದ್ದು, ಅರಿವಳಿಕೆ ಅಡಿಯಲ್ಲಿರುವ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆದು ಮುದ್ರೆಯೊಂದಿಗೆ ಸಹಿ ಹಾಕಬೇಕಾಗುತ್ತದೆ.
ಕಾರ್ಯವಿಧಾನ ಮುಗಿದ ಬಳಿಕ ಬಿಡೆನ್ ಅವರಿಗೆ ಮತ್ತೊಂದು ಪತ್ರವನ್ನು ಕಳುಹಿಸುವವರೆಗೆ ಹಾಗೂ ಅವರು ತಮ್ಮ ಕರ್ತವ್ಯಗಳನ್ನು ಪುನರಾರಂಭಿಸುವವರೆಗೂ ಕಮಲಾ ಹ್ಯಾರಿಸ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಕಾರ್ಯನಿರ್ವಹಿಸಲು ಅಧಿಕಾರ ನೀಡುತ್ತದೆ.
ಕಮಲಾ ಹ್ಯಾರಿಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅಲ್ಪಾವಧಿಯಲ್ಲಿ, ಅವರು ಯುನೈಟೆಡ್ ಸ್ಪೇಟ್ಸ್ನ ಇತಿಹಾಸದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಹೊಂದಲಿರುವ ಮೊದಲ ಮಹಿಳೆಯಾಗಿದ್ದಾರೆ.
"ಒಂದು ವರ್ಷದ ಹಿಂದೆ ಜೋ ಬಿಡೆನ್ ಅವರು ನಡೆಯುವಾಗ ಕಾಲಿಗೆ ಪೆಟ್ಟು ಬಿದ್ದು ಸಮಸ್ಯೆಯಾಗಿತ್ತು. ಗಂಟಲಿನ ಸಮಸ್ಯೆ ಹೊಂದಿದ್ದು, ಸಾರ್ವಜನಿಕ ಸಭೆ-ಕಾರ್ಯಕ್ರಮಗಳಲ್ಲಿ ಮಾತನಾಡುವ ಸಂದರ್ಭ ಕೆಮ್ಮು ಬರುತ್ತದೆ ಎಂದು ವೈದ್ಯರು ವರದಿಯಲ್ಲಿ ಬರೆದಿದ್ದಾರೆ. ಇದು ಗಂಭೀರವಾದ ಆರೋಗ್ಯ ಸಮಸ್ಯೆಯೇನಲ್ಲ. ದೀರ್ಘಾವಧಿಯ ವಿಶ್ರಾಂತಿಯ ಅವಶ್ಯಕತೆಯೂ ಇಲ್ಲ" ಎಂದು ವೈದ್ಯ ಒ ಕೊನ್ನೊರ್ ಹೇಳಿದ್ದಾರೆ.
"ಜೋ ಬಿಡೆನ್ ಅವರ ದೇಹವನ್ನು ವೈದ್ಯರು ಸಂಪೂರ್ಣ ತಪಾಸಣೆ ಮಾಡಿದ್ದು, ಯಾವುದೇ ರೀತಿಯಾದ ಗಂಭೀರ ಸಮಸ್ಯೆಯಿಲ್ಲ. ಹೃದಯದ ಸಮಸ್ಯೆ, ಹಲ್ಲಿನ ಸಮಸ್ಯೆ, ಚರ್ಮದ ಕ್ಯಾನ್ಸರ್ ಸಮಸ್ಯೆ, ಕಣ್ಣಿನ ಅನಾರೋಗ್ಯ ಹೀಗೆ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ" ಎಂದು ವೈದ್ಯರು ವರದಿ ನೀಡಿದ್ದಾರೆ.
ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು 2002-2007ರ ಮಧ್ಯೆ ಅಧ್ಯಕ್ಷರಾಗಿದ್ದ ವೇಳೆ ಒಮ್ಮೆ ಅನಾರೋಗ್ಯಕ್ಕೀಡಾಗಿದ್ದ ಸಂದರ್ಭ ತಮ್ಮ ಹುದ್ದೆಯನ್ನು ಅಲ್ಪಾವಧಿಗೆ ವರ್ಗಾಯಿಸಿದ್ದರು.