ಇಸ್ಲಾಮಾಬಾದ್, ನ.20 (DaijiworldNews/PY): ಅತ್ಯಾಚಾರ ಅಪರಾಧಿಗಳ ಕಾಮಾಸಕ್ತಿ ಕುಗ್ಗಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದ್ದು, ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆ ಮಾಡುವ ಮಸೂದೆಗೆ ಪಾಕ್ ಸಂಸತ್ನಲ್ಲಿ ಅಂಗೀಕಾರ ದೊರತಿದೆ.
ಪಾಕಿಸ್ತಾನದಲ್ಲಿ ಅತ್ಯಚಾರ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದ್ದು, ಈ ಹಿನ್ನೆಲೆ ಪಾಕ್ ಪ್ರಧಾನಿ ಕಳೆದ ವರ್ಷ ಈ ಮಸೂದೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು. ಈಗ ಪಾರ್ಲಿಮೆಂಟ್ನಲ್ಲಿ ಮಸೂದೆ ಅಂಗೀಕಾರವಾಗಿದೆ.
ಪಾಕಿಸ್ತಾನದಲ್ಲಿ ಮಹಿಳೆಯರು ಸೇರಿದಂತೆ ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದ್ದು, ಆರೋಪಿಗಳ ವೃಷಣವನ್ನೇ ಕತ್ತರಿಸಬೇಕು ಎಂದು ಆಗ್ರಹಿಸಲಾಗಿತ್ತು. ಇದಾದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಅತ್ಯಾಚಾರ ತಡೆಗೆ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ನೀಡಿತ್ತು.
ಏನಿದು ಕೆಮಿಕಲ್ ಕ್ಯಾಸ್ಟ್ರೇಶನ್?
ಅತ್ಯಾಚಾರವೆಸಗುವ ಅಪರಾಧಿಯ ಮೇಲೆ ರಾಸಾಯನಿಕ ಬಳಕೆ ಮಾಡುವುದರಿಂದ ಆತನ ಜೀವಿತಾವಧಿಯಲ್ಲಿ ಮತ್ತೆ ಸಂಭೋಗ ಮಾಡಲು ಅಸಮರ್ಥನಾಗಿರುತ್ತಾನೆ. ಆದರೆ, ಇದಕ್ಕೆ ಕೋರ್ಟ್ ಹಾಗೂ ನ್ಯಾಯಾಲಯ ಅನುಮತಿ ಕಡ್ಡಾಯವಾಗಿದೆ.
ಲಾಹೋರ್-ಸಿಯಾಲ್ಕೋರ್ಟ್ ರೋಡ್ನಲ್ಲಿ 2020ರ ನವೆಂಬರ್ನಲ್ಲಿ ಮಕ್ಕಳ ಎದುರೇ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದೇಶಾದ್ಯಂತ ಪ್ರತಿಭಟನೆ ಸಹ ನಡೆದಿತ್ತು.