ಕಠ್ಮಂಡು, ನ.21 (DaijiworldNews/HR): ಯೋಗ ಗುರು ರಾಮದೇವ್ ಮಾಲೀಕತ್ವದ ಎರಡು ಟಿವಿ ಚಾನೆಲ್ಗಳನ್ನು ನೇಪಾಳದಲ್ಲಿ ಆರಂಭಿಸಲಾಗಿದ್ದು, ನೋಂದಣಿ ಮಾಡಿಸದೆಯೇ ಕಾರ್ಯಾಚರಣೆ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು 'ಆಸ್ಥಾ ನೇಪಾಳ ಟಿವಿ ಮತ್ತು ಪತಂಜಲಿ ನೇಪಾಳ ಟಿವಿ' ಎಂಬ ಎರಡು ಟಿವಿ ಚಾನೆಲ್ಗಳಿಗೆ ಚಾಲನೆ ನೀಡಿದ್ದರು.
ಇನ್ನು ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಹಾಗೂ ಪ್ರಮುಖ ಪಕ್ಷಗಳ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಾಹಿತಿ ಮತ್ತು ಪ್ರಸಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೊಗಾನ್ ಬಹದ್ದೂರ್ ಹಮಾಲ್ ಈ ಕುರಿತು ಮಾತನಾಡಿದ್ದು, 'ನೇಪಾಳದ ಕಾನೂನಿನ ಪ್ರಕಾರ ಮಾಧ್ಯಮ ವಲಯದಲ್ಲಿ ವಿದೇಶಿ ಹೂಡಿಕೆಗೆ ಅವಕಾಶವಿಲ್ಲ. ಈ ಎರಡು ಟಿವಿ ಚಾನೆಲ್ಗಳನ್ನು ನೋಂದಾಯಿಸುವುದರ ಸಂಬಂಧ ನಮಗೆ ಯಾವುದೇ ಮನವಿ ಸಲ್ಲಿಕೆಯಾಗಿಲ್ಲ. ಟಿವಿ ಚಾನೆಲ್ಗಳ ನೋಂದಣಿಗೆ ಸಂಬಂಧಿಸಿದಂತೆ ತನಿಖೆಗಾಗಿ ನಾವು ತಂಡವನ್ನು ರಚಿಸಿದ್ದೇವೆ. ಪೂರ್ವಾನುಮತಿ ಇಲ್ಲದೆಯೇ ಅವರು ಕಾರ್ಯಕ್ರಮ ಪ್ರಸಾರ ಆರಂಭಿಸಿದ್ದರೆ, ಸೂಕ್ತ ಕ್ರಮಕೈಗೊಳ್ಳುತ್ತೇವೆ" ಎಂದಿದ್ದಾರೆ.