ಪ್ಯಾರಿಸ್, ನ 25 (DaijiworldNews/MS): ಕಡಿದಾದ ತೀರಾ ಅಪಾಯಕಾರಿ ಇಂಗ್ಲಿಷ್ ಕಾಲುವೆಯಲ್ಲಿ ವಲಸಿಗರ ಬೋಟ್ ಮಗುಚಿ ಸುಮಾರು 31ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಬ್ರಿಟನ್ಗೆ ತೆರಳುತ್ತಿದ್ದ ಬೋಟ್ ನಲ್ಲಿ 34 ಮಂದಿ ಇದ್ದರು ಎಂದು ನಂಬಲಾಗಿದೆ. ಇದು ಅತ್ಯಂತ ದೊಡ್ಡ ವಲಸಿಗರ ದುರಂತ ಎಂದು ಫ್ರಾನ್ಸ್ ನ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಅಧಿಕಾರಿಗಳು 31 ಶವಗಳನ್ನು ಹೊರತೆಗೆದಿದ್ದು, ಇಬ್ಬರನ್ನು ರಕ್ಷಿಸಿದ್ದಾರೆ, ಒಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದು ಇನ್ನೂ ಪತ್ತೆ ಹಚ್ಚಿಲ್ಲ. ವಲಸಿಗ ಪ್ರಯಾಣಿಕರು ಯಾವ ದೇಶದವರೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಇಂಗ್ಲಿಷ್ ಕಾಲುವೆ ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾಗಿದ್ದು, ಇದು ದಕ್ಷಿಣ ಇಂಗ್ಲೆಂಡನ್ನು ಉತ್ತರ ಫ್ರಾನ್ಸ್ನಿಂದ ಪ್ರತ್ಯೇಕಿಸುತ್ತದೆ ಮತ್ತು ಉತ್ತರ ಸಮುದ್ರದ ದಕ್ಷಿಣ ಭಾಗಕ್ಕೆ ಅದರ ಈಶಾನ್ಯ ತುದಿಯಲ್ಲಿರುವ ಡೋವರ್ ಜಲಸಂಧಿಯಿಂದ ಸಂಪರ್ಕಿಸುತ್ತದೆ. ಇದು ವಿಶ್ವದ ಅತೀ ಹೆಚ್ಚು ಹಡಗುಗಳು ಪಯಣಿಸುವ ಪ್ರದೇಶವಾಗಿದೆ.
ಅಫ್ಘಾನಿಸ್ತಾನ, ಸುಡಾನ್, ಇರಾಕ್, ಎರಿಟ್ರಿಯಾಗಳಂತಹ ದೇಶಗಳಲ್ಲಿ ಹೆಚ್ಚಿದ ಆಂತರಿಕ ಕಲಹ ಹಾಗೂ ಬಡತನದಿಂದಾಗಿ ಜನರು ಬ್ರಿಟನ್ನಲ್ಲಿ ಉತ್ತಮ ಜೀವನ ಪಡೆಯಲು ಅಪಾಯಕಾರಿ ಕಾಲುವೆಗಳ ಮೂಲಕ ಪ್ರಯಾಣಿಸುತ್ತಿದ್ದಾರೆ. ಚಿಕ್ಕ, ಕಡಿಮೆ ಗುಣಮಟ್ಟದ ಬೋಟ್ಗಳಲ್ಲಿ ಕಡಿದಾದ ಇಂಗ್ಲಿಷ್ ಕಾಲುವೆ ದಾಟುವುದು ಅತ್ಯಂತ ಅಪಾಯಕಾರಿ. ಹಾಗಿದ್ದರೂ ವಲಸಿಗರು ಜೀವ ಪಣಕ್ಕಿಟ್ಟುನವ ಜೀವನದ ಆಸೆಯಲ್ಲಿ ಪಯಾಣಿಸುತ್ತಾರೆ.