ಜೊಹಾನ್ಸ್ಬರ್ಗ್, ನ.27 (DaijiworldNews/PY): "ಓಮ್ರಿಕಾನ್ ಹೆಸರಿನ ಕೊರೊನಾ ವೈರಸ್ನ ಹೊಸ ತಳಿಯ ಪ್ರಸರಣವನ್ನು ತಡೆಯಲು ದೇಶದ ಪ್ರಯಾಣಿಕರ ಮೇಲೆ ನಿರ್ಬಂಧ ಹೇರುವುದು ನ್ಯಾಯಸಮ್ಮತವಲ್ಲ" ಎಂದು ದಕ್ಷಿಣ ಆಫ್ರಿಕಾ ಹೇಳಿದೆ.
ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಇದು ಅತ್ಯಂತ ಕಠಿಣ, ಅವೈಜ್ಞಾನಿಕ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳಿಗೆ ವಿರುದ್ದವಾದದ್ದು" ಎಂದಿದ್ದಾರೆ.
"ದಕ್ಷಿಣ ಆಫ್ರಿಕಾವು ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಯಾಣ ನಿಷೇಧವು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳು ಮತ್ತು ಮಾನದಂಡಗಳಿಗೆ ವಿರುದ್ಧವಾಗಿದೆ" ಎಂದು ಹೇಳಿದ್ದಾರೆ.
"ಕೆಲವೊಂದು ಪ್ರತಿಕ್ರಿಯೆಗಳು ನ್ಯಾಯಸಮ್ಮತವಲ್ಲ ಎಂದು ನಾವು ಭಾವಿಸಿದ್ದೇವೆ. ಅಲ್ಲದೇ, ಕೆಲವರು ಬಲಿಪಶುಗಳನ್ನು ಹುಡುಕುತ್ತಿದ್ದಾರೆ" ಎಂದು ದೂರಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನ.24ರಂದು ಕೊರೊನಾದ ಹೊಸ ತಳಿಯು ಆತಂಕಕಾರಿ ಮಾದರಿ ಎಂದು ವಿಶ್ವಸಂಸ್ಥೆ ತಿಳಿಸಿತ್ತು. ಬೆಲ್ಜಿಯಂ ಸೇರಿದಂತೆ ಬೋಟ್ಸ್ವಾನಾ ಹಾಗೂ ಹಾಕಾಂಗ್ನಲ್ಲಿ ಈ ತಳಿ ಕಂಡುಬಂದಿದೆ.
ಈ ಹಿನ್ನೆಲೆ ಜರ್ಮನಿ, ಆಸ್ಟ್ರಿಯಾ ಸೇರಿದಂತೆ ಅಮೇರಿಕಾ, ಫ್ರಾನ್ಸ್, ಇಟಲಿ, ಕೆನಡಾ ಹಾಗೂ ನೆದರ್ಲೆಂಡ್ ದೇಶಗಳು ದಕ್ಷಿಣಾ ಆಫ್ರಿಕಾ ಮೇಲೆ ಪ್ರಯಾಣ ನಿಷೇಧ ಹೇರಿವೆ.