ನ್ಯೂಜಿಲ್ಯಾಂಡ್, ನ.28 (DaijiworldNews/PY): ಹೆರಿಗೆ ನೋವಿನ ನಡುವೆಯೂ ನ್ಯೂಜಿಲೆಂಡ್ನ ಸಂಸದೆಯೋರ್ವರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನ್ಯೂಜಿಲೆಂಡ್ನ ಸಂಸದೆ ಜೂಲಿ ಅನ್ನೆ ಜೆಂಟರ್ ಅವರಿಗೆ ಭಾನುವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಗೆ ತಲುಪಿ 1 ಗಂಟೆಯ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಚಾರವನ್ನು ಸಂಸದೆ ಜೂಲಿ ಅನ್ನೆ ಜೆಂಟರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ಬೆಳಗ್ಗೆ 3.04 ಗಂಟೆಗೆ ಸರಿಯಾಗಿ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಆಹ್ವಾನಿಸಿಕೊಂಡೆವು. ಹೆರಿಗೆ ಆಸ್ಪತ್ರೆಗೆ ಸೈಕಲ್ನಲ್ಲಿ ಬರುವ ಬಗ್ಗೆ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ, ಕೊನೆಗೆ ಸೈಕಲ್ನಲ್ಲಿ ಆಸ್ಪತ್ರೆಗೆ ಬಂದೆ" ಎಂದು ಬರೆದುಕೊಂಡಿದ್ದಾರೆ.
"ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಮನೆಯಿಂದ ಹೊರಟ ವೇಳೆ ಹೆಚ್ಚು ನೋವು ಇರಲಿಲ್ಲ. ಸೈಕಲ್ ಏರಿ ಆಸ್ಪತ್ರೆಗೆ ಹೊರಟಿದ್ದು, 10 ನಿಮಿಷದೊಳಗೆ ಆಸ್ಪತ್ರೆಗೆ ತಲುಪಿದೆವು. ಆರೋಗ್ಯಕರ ಹೆರಿಗೆಗೆ ಸಹಕರಿಸಿದ ಆಸ್ಪತ್ರೆಯ ತಂಡಕ್ಕೆ ಧನ್ಯವಾದ" ಎಂದು ಹೇಳಿದ್ದಾರೆ.