ಸ್ವಿಟ್ಜರ್ಲೆಂಡ್, ನ 07 (DaijiworldNews/MS): ಜಗತ್ತಿನಲ್ಲಿ ಪ್ರತಿ 40 ಸೆಕೆಂಡಿಗೆ ಒಂದು ಸಾವು ಸಂಭವಿಸುತ್ತದೆ ಈ ಪೈಕಿ 15-29 ವರ್ಷ ವಯಸ್ಸಿನ ಮಕ್ಕಳ ಸಾವಿಗೆ ಆತ್ಮಹತ್ಯೆ ಎರಡನೇ ಪ್ರಮುಖ ಕಾರಣವಾಗಿದೆ. ಆತ್ಮಹತ್ಯೆ ಎನ್ನುವುದು ತಪ್ಪು , ಸಮಸ್ಯೆಗಳನ್ನು ಎದುರಿಸಿ , ಬದುಕಿ ಆತ್ಮಹತ್ಯೆಯನ್ನು ತಡೆಗಟ್ಟುವ ಅತ್ಯುತ್ತಮ ಮಾರ್ಗಗಳಲ್ಲಿ ಯಾತನೆಯಲ್ಲಿರುವವರು ಅವರ ಕುರಿತಾಗಿ ಕಾಳಜಿ ವಹಿಸುವ ಜನರ ಮಾತನ್ನು ಕೇಳುವುದು ಒಂದು ಎಂಬುದಾಗಿ ತಜ್ಞರು ಹೇಳುತ್ತಾರೆ. ಆದರೆ ಈ ಎಲ್ಲಾ ವಿಚಾರಗಳ ನಡುವೆ ದೇಶವೊಂದರಲ್ಲಿ ಆತ್ಮಹತ್ಯೆ ಯಂತ್ರವನ್ನು ಕಂಡುಹಿಡಿಯಲಾಗಿದ್ದು, ಇದನ್ನು ಕಾನೂನುಬದ್ಧಗೊಳಿಸಲಾಗಿರುವು ಇನ್ನೊಂದು ವಿಶೇಷ .
ಸ್ವಿಟ್ಜರ್ಲ್ಯಾಂಡ್ ಶವಪೆಟ್ಟಿಗೆಯ ಆಕಾರದ ಸಾರ್ಕೊ ಹೆಸರಿನ ಆತ್ಮಹತ್ಯಾ ಯಂತ್ರವೊಂದನ್ನು ಪರಿಚಯಿಸಿದ್ದು , ಅದನ್ನು ಕಾನೂನುಬದ್ಧಗೊಳಿಸಿದೆ. ಈ ಯಂತ್ರ ತಯಾರಿಕೆಯ ಹಿಂದಿರುವ ವ್ಯಕ್ತಿ ಎಂದರೆ ಎಕ್ಸಿಟ್ ಇಂಟರ್ನ್ಯಾಷನಲ್ ಎಂಬ ಲಾಭರಹಿತ ಸಂಸ್ಥೆಯ ನಿರ್ದೇಶಕ, ಡಾಕ್ಟರ್ ಡೆತ್ ಎಂದು ಕರೆಯಲ್ಪಡುವ ಡಾ ಫಿಲಿಪ್ ನಿಟ್ಶ್ಕೆ. ಆತ್ಮಹತ್ಯೆ ಯಂತ್ರವಾದ ಸಾರ್ಕೊ ಹೆಸರಿನ ಮೆಷಿನ್ ಒಂದು ನಿಮಿಷದಲ್ಲಿ ನೋವುರಹಿತ ಮರಣವನ್ನು ನೀಡುತ್ತದೆ.
ಪೆಟ್ಟಿಗೆಯಲ್ಲಿ ಆಮ್ಲಜನಕದ ಸವಕಳಿಯಿಂದಾಗಿ ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾದಿಂದ ಸಾವು ಸಂಭವಿಸುತ್ತದೆ. ಸಾಯಲು ಬಯಸುವವನು ಪೆಟ್ಟಿಗೆಯಲ್ಲಿ ಮಲಗಿದ್ದರೆ ಯಂತ್ರವು ಅನೇಕ ಪ್ರಶ್ನೆಗಳನ್ನು ಕೇಳುತ್ತದೆ. ಎಲ್ಲದಕ್ಕೂ ಸರಿಯಾದ ಉತ್ತರವನ್ನು ನೀಡಿದ ನಂತರ, ಅಂತಿಮವಾಗಿ ಯಂತ್ರದೊಳಗಿನ ಬಟನ್ ಅನ್ನು ಒತ್ತಬಹುದು.
ಯಂತ್ರವನ್ನು ಬಳಸುವ ವ್ಯಕ್ತಿಯು ಲಾಕ್-ಇನ್ ಸಿಂಡ್ರೋಮ್ನಿಂದ ಬಳಲುತ್ತಿದ್ದರೆ (ರೋಗಿಯೂ ಪ್ರಜ್ಞೆಯಲ್ಲಿರುವ ಆದರೆ ದೇಹದ ಎಲ್ಲಾ ಸ್ವಯಂಪ್ರೇರಿತ ಸ್ನಾಯುಗಳ ಸಂಪೂರ್ಣ ಪಾರ್ಶ್ವವಾಯುವಿನ ಕಾರಣದಿಂದಾಗಿ ಚಲಿಸಲು ಅಥವಾ ಮಾತಿನ ಮೂಲಕ ಸಂವಹನ ಮಾಡಲು ಸಾಧ್ಯವಾಗದ ಸ್ಥಿತಿ) ಕಣ್ಣು ಮಿಟುಕಿಸುವ ಮೂಲಕವೂ ಯಂತ್ರವನ್ನು ಒಳಗಿನಿಂದ ನಿರ್ವಹಿಸಬಹುದು. (ಲಂಬ ವಾಗಿ ಕಣ್ಣಿನ ಚಲನೆಗಳು ಮತ್ತು ಮಿಟುಕಿಸುವುದು) ಎಂದು ವರದಿ ತಿಳಿಸಿದೆ
ಯಂತ್ರವನ್ನು ಬಳಕೆದಾರರ ಆದ್ಯತೆಯ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ ಮತ್ತು ನಂತರ ಶವಪೆಟ್ಟಿಗೆಯಾಗಿ ಕಾರ್ಯನಿರ್ವಹಿಸಲು ಜೈವಿಕ ವಿಘಟನೀಯ ಕ್ಯಾಪ್ಸುಲ್ ಅನ್ನು ಬೇಸ್ನಿಂದ ಬೇರ್ಪಡಿಸಲಾಗುತ್ತದೆ.ಸ್ವಿಟ್ಜರ್ಲೆಂಡ್ನಲ್ಲಿ ದಯಾಮರಣ ಕಾನೂನುಬದ್ಧವಾಗಿದ್ದು, ಕಳೆದ ವರ್ಷ ಸುಮಾರು 1,300 ಜನರು ದಯಾಮರಣ ಸೇವೆಯನ್ನು ಬಳಸಿಕೊಂಡಿದ್ದಾರೆ.
ಈ ಆತ್ಮಹತ್ಯಾ ಯಂತ್ರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದು , ಯಂತ್ರವು ಆತ್ಮಹತ್ಯೆಯನ್ನು ವೈಭವೀಕರಿಸುತ್ತದೆ ಎಂದು ಹಲವು ವಿಮರ್ಶಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821