ವಾಷಿಂಗ್ಟನ್, ಡಿ.08 (DaijiworldNews/PY): ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾ, ತನ್ನ ಚಂದ್ರನ ಸಂಶೋಧನೆಗಾಗಿ 10 ತರಬೇತಿ ಗಗನಯಾತ್ರಿಗಳನ್ನು ಆಯ್ಕೆ ಮಾಡಿದ್ದು, ಈ ಯೋಜನೆಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್ ಅವರು ಸೇರ್ಪಡೆಯಾಗಿದ್ದಾರೆ.
45 ವರ್ಷದ ಅನಿಲ್ ಮನನ್ ಅವರು ನಾಸಾದ ಸ್ಪೇಸ್ ಎಕ್ಸ್ ಕಾರ್ಯಾಚರಣೆಯಲ್ಲಿ ಫ್ಲೈಟ್ ಸರ್ಜನ್ ಆಗಿ ಕಾರ್ಯ ನಿರ್ವಹಿಸಿದ್ದರು. ಅನಿಲ್ ಅವರು ಅಮೇರಿಕಾ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾಸಾದ ಮೂನ್ ಮಿಷನ್ಗೆ 12 ಸಾವಿರ ಅರ್ಜಿಗಳು ಬಂದಿದ್ದು, ಆ ಪೈಕಿ 10 ಮಂದಿ ಮಾತ್ರ ತರಬೇತಿಗೆ ಆಯ್ಕೆಯಾಗಿದ್ದಾರೆ. ಈ ತಂಡ ಮತ್ತೆ ಎರಡು ವರ್ಷಗಳ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ನಾಸಾದ ಎಲ್ಲಾ ರೀತಿಯ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಅವರೆಲ್ಲರೂ ನಾಸಾದ ಆರ್ಟೆಮಿಸ್ ಜನರೇಷನ್ ಪ್ರೋಗ್ರಾಮ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಡಿ 2025ರಲ್ಲಿ ಚಂದ್ರನ ಮೇಲ್ಮೈಗೆ ಮೊದಲ ಮಹಿಳೆ ಹಾಗೂ ಪುರುಷನನ್ನು ಕಳುಹಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.
ಅನಿಲ್ ಮೆನನ್ ಅವರ ಪೋಷಕರು ಭಾರತೀಯ ಹಾಗೂ ಉಕ್ರೀನಿಯನ್ ಆಗಿದ್ದು, ಇವರು ಅಮೇರಿಕಾದ ಮಿನ್ನೇಸೋಟದಲ್ಲಿ ನೆಲೆಸಿದ್ದಾರೆ. ಅನಿಲ್ ಮೆನನ್ ಅವರು 1999ರಲ್ಲಿ ಹಾರ್ವರ್ಡ್ ವಿಶ್ವಿವಿದ್ಯಾಲಯದಿಂದ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದರು. ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ 2004 ರಲ್ಲಿ ಮೆಕ್ಯಾನಿಕ್ ಎಂಜಿನಿಯರಿಂಗ್ ಹಾಗೂ ಸ್ಟ್ಯಾನ್ಫೋರ್ಡ್ ವೈದ್ಯಕೀಯ ಶಾಲೆಯಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಅನಿಲ್ ಮೆನನ್ ಅವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾದ ಹಲವು ಯೋಜನೆಗಳಿಗೆ ಸೇವೆ ಸಲ್ಲಿಸಿದ್ದಾರೆ.