ಲಾಹೋರ್, ಡಿ.09 (DaijiworldNews/PY): ಲಾಹೋರ್ನ ರೈಲ್ವೆ ನಿಲ್ದಾಣದ ಬಳಿ ಮೊಸರು ಖರೀದಿಸಲು ರೈಲನ್ನು ನಿಲ್ಲಿಸಿದ ಪಾಕಿಸ್ತಾನಿ ರೈಲು ಚಾಲಕ ಹಾಗೂ ಸಹಾಯಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ರೈಲು ಚಾಲಕ ಕಹ್ನಾ ಕಚಾ ರೈಲು ನಿಲ್ದಾಣದ ಬಳಿ ಮೊಸರು ಖರೀದಿಸಲು ರೈಲನ್ನು ನಿಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ರೈಲ್ವೆ ಸಚಿವ ಅಜಮ್ ಖಾನ್ ಸ್ವಾತಿ ಚಾಲಕ ಹಾಗೂ ಸಹಾಯಕನನ್ನು ಅಮಾನತುಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಸಚಿವರು ಕ್ರಮ ಕೈಗೊಂಡಿದ್ದು, ಚಾಲಕ ರಾಣಾ ಮೊಹಮ್ಮದ್ ಶೆಹಜಾದ್ ಹಾಗೂ ಸಹಾಯಕ ಇಫ್ತಿಕರ್ ಹುಸೇನ್ ಅನ್ನು ಅಮಾನತುಗೊಳಿಸುವಂತೆ ಪಾಕಿಸ್ತಾನ ರೈಲ್ವೇಸ್ ಲಾಹೋರ್ ಆಡಳಿತಕ್ಕೆ ಆದೇಶಿಸಿದ್ದಾರೆ.
ಭವಿಷ್ಯದಲ್ಲಿ ನಾನು ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಹಾಗೂ ರಾಷ್ಟ್ರೀಯ ಆಸ್ತಿಯನ್ನು ವೈಯುಕ್ತಿಕ ಬಳಕೆಗೆ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈಲಿನ ಸಿಬ್ಬಂದಿಯನ್ನು ಟ್ಯ್ರಾಕ್ ಮಾಡಲು ಹಾಗೂ ಯಾರಾದರೂ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಆಯಾ ವಿಭಾಗೀಯ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.