ಸಿಂಗಾಪುರ ಡಿ 10(DaijiworldNews/MS): ಸಿಂಗಾಪುರದಲ್ಲಿ ಕೋವಿಡ್-19 ಎರಡು ಲಸಿಕೆಗಳ ಜತೆಗೆ, ಬೂಸ್ಟರ್ ಲಸಿಕೆಯನ್ನೂ ಪಡೆದಿದ್ದ ಇಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ.
ವಿಮಾನ ನಿಲ್ದಾಣದ ಪ್ರಯಾಣಿಕ-ಸೇವಾ ವಿಭಾಗದಲ್ಲಿ ಕೆಲಸ ಮಾಡುವ 24 ವರ್ಷದ ಮಹಿಳೆ ಹಾಗೂ ಜರ್ಮನಿಯಿಂದ ಸಿಂಗಪುರಕ್ಕೆ ಬಂದ ವ್ಯಕ್ತಿಯೊಬ್ಬರಲ್ಲಿಯೂ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ, ಇವರಿಬ್ಬರು ಲಸಿಕೆ ಪೂರ್ಣ ಡೋಸ್ನ ಜತೆಗೆ ಬೂಸ್ಟರ್ (ಮೂರನೇ) ಡೋಸ್ ಕೂಡ ಪಡೆದಿದ್ದರು. ಹೀಗಾಗಿ ಕೋವಿಡ್ ವಿರುದ್ಧ ಮೂರನೇ ಡೋಸ್ ಲಸಿಕೆ ನೀಡಬಹುದಾದ ರಕ್ಷಣೆಯ ಬಗ್ಗೆ ಅನುಮಾನಗಳು ಮೂಡಿವೆ.
ಫೈಜರ್ ಮತ್ತು ಬಯೋಎನ್ಟೆಕ್ ಸಂಸ್ಥೆಗಳು ಮೂರನೇ ಡೋಸ್ ಅನ್ನು ಓಮಿಕ್ರಾನ್ ರೂಪಾಂತರವನ್ನು ತಟಸ್ಥಗೊಳಿಸಲು ಅಗತ್ಯವಾಗಬಹುದು ಎಂದು ಹೇಳಿತ್ತು. ಆದರೆ ಇದೀಗ ಮೂರನೇ ಡೋಸ್ ಲಸಿಕೆ ನೀಡಬಹುದಾದ ರಕ್ಷಣೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದೆ.
‘ತನ್ನ ಪ್ರಸರಣ ಶಕ್ತಿಯಿಂದ ಪ್ರಪಂಚದ ಅನೇಕ ಭಾಗಗಳಿಗೆ ಹರಡಿರುವ ಓಮಿಕ್ರಾನ್ , ನಮ್ಮ ದೇಶದಲ್ಲೂ ಹಬ್ಬುತ್ತಿದ್ದು, ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ,‘ ಎಂದು ಆರೋಗ್ಯ ಇಲಾಖೆ ಹೇಳಿದೆ. ಸದ್ಯ ಬೂಸ್ಟರ್ ಲಸಿಕೆ ಪಡೆದೂ ಓಮಿಕ್ರಾನ್ ಸೋಂಕಿಗೆ ಒಳಗಾಗಿರುವ ಇಬ್ಬರನ್ನೂ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ ಅವರನ್ನು 10 ದಿನಗಳ ಕ್ವಾರಂಟೈನ್ನಲ್ಲಿ ಇರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.