ಮೇಫೀಲ್ಡ್, ಡಿ.12 (DaijiworldNews/PY): ಅಮೇರಿಕಾದ ಹಲವು ರಾಜ್ಯಗಳಲ್ಲಿ ಶುಕ್ರವಾರ ಸಂಜೆಯಿಂದ ಏಕಾಏಕಿ ಆರಂಭವಾದ ಬಿರುಗಾಳಿಯಿಂದ 80ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ಕಾಣೆಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್, "ಇದು ಅಮೇರಿಕಾದ ಇತಿಹಾಸದಲ್ಲಿಯೇ ಅತಿದೊಡ್ಡ ಚಂಡಮಾರುತ ಆಗಿದೆ. ಇದರಿಂದ ಎಷ್ಟು ಜೀವಗಳು ಸಾವಿಗೀಡಾಗಿವೆ ಹಾಗೂ ಹಾನಿಯ ಪೂರ್ಣ ಪ್ರಮಾಣದ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ" ಎಂದಿದ್ದಾರೆ.
ಸುಂಟರಗಾಳಿಗೆ ಕೆಂಟುಕಿಯೊಂದರಲ್ಲೇ 70ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಈ ಪೈಕಿ ಹೆಚ್ಚಿನ ಮಂದಿ ಮೇಣದಬತ್ತಿ ಕಾರ್ಖಾನೆಯ ಕಾರ್ಮಿಕರು ಹಾಗೂ ಇಲಿನಾಯಿಸ್ನ ಅಮೆಜಾನ್ ವೇರ್ಹೌಸ್ನಲ್ಲಿ ಸಿಲುಕಿದ್ದವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಕ್ರಿಸ್ಮಸ್ ಅಂಗವಾಗಿ ಅವರು ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬಿರುಗಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರ ಶೋಧ ಹಾಗೂ ರಕ್ಷಣಾ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದವರನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಬದುಕುಳಿದವರರ ಪತ್ತೆಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಗವರ್ನರ್ ಆಯಂಡಿ ಬೆಶಿಯರ್, "ನಾನು ಈವರೆಗೆ ಈ ವಿನಾಶವನ್ನು ನೋಡಿದ್ದಕ್ಕಿಂತ ಭಿನ್ನವಾಗಿದೆ. ಅದನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ. ಇದರಲ್ಲಿ ನಾವು 100ಕ್ಕೂ ಅಧಿಕ ಮಂದಿಯನ್ನು ಕಳೆದುಕೊಂಡಿರಬಹುದು" ಎಂದಿದ್ದಾರೆ.
ಸದ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.