ವಾಷಿಂಗ್ಟನ್, ಡಿ.17 (Daijiworld/PY): "ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಒಮೈಕ್ರಾನ್ ಸೋಂಕಿನಿಂದ ರಕ್ಷಣೆ ಪಡೆಯಲು ಸಾಧ್ಯ" ಎಂದು ಅಮೇರಿಕಾ ಅಧ್ಯಕ್ಷ ಜೊ ಬಿಡೆನ್ ಹೇಳಿದ್ದಾರೆ.
"ಅಮೇರಿಕಾದಲ್ಲಿ ಒಮೈಕ್ರಾನ್ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಅರ್ಹತೆಯುಳ್ಳ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಒಮೈಕ್ರಾನ್ ವಿರುದ್ದ ರಕ್ಷಣೆ ಪಡೆಯಬಹುದಾಗಿದೆ. ಈವರೆಗೆ ನೀವು ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ಈಗ ಲಸಿಕೆ ಹಾಕಿಸಿಕೊಳ್ಳುವ ಸಮಯ ಬಂದಿದೆ. ನೀವು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಹಾಗೂ ಕನಿಷ್ಠ 6 ತಿಂಗಳ ಹಿಂದೆ ಲಸಿಕೆಯನ್ನು ಪಡೆದಿದ್ದರೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಿ. ನಿಮ್ಮ ಹತ್ತಿರದ ಕ್ಲಿನಿಕ್ ಅನ್ನು ಹುಡುಕಲು http://Vaccines.gov ವೆಬ್ಸೈಟ್ಗೆ ಭೇಟಿ ಕೊಡಿ" ಎಂದಿದ್ದಾರೆ.
"ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಂದಾಗಿ ಒಮೈಕ್ರಾನ್ ಸೋಂಕು ತೀವ್ರವಾಗಿ ವ್ಯಾಪಿಸುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ತೀವ್ರ ಅನಾರೋಗ್ಯ ಹಾಗೂ ಸಾವು ಸಂಭವಿಸುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.