ಒಸಾಕಾ,ಡಿ 17 (DaijiworldNews/MS): ಜಪಾನಿನ ಒಸಾಕಾದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾಲಯವನ್ನು ಹೊಂದಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 27 ಜನರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಎಂಟು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಮತ್ತು ಸಾಮಾನ್ಯ ವೈದ್ಯಕೀಯ ಆರೈಕೆಯನ್ನು ಒದಗಿಸುವ ಕ್ಲಿನಿಕ್ ಅನ್ನು ಹೊಂದಿದ್ದು ಇಲ್ಲೇ ಬೆಂಕಿ ಅವಘಡ ಉಂಟಾಯಿತು ಎಂದು ವರದಿಯಾಗಿದೆ
ಬೆಂಕಿಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಯಾರೋ ಬೆಂಕಿ ಹೊತ್ತಿಸಿರುವ ಹಾಗಿದೆ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ಇತರ ಮಹಡಿಗಳಲ್ಲಿದ್ದ ಜನರನ್ನು ತೆರವುಗೊಳಿಸಲಾಗಿದೆ.
ಬೆಳಿಗ್ಗೆ 10:18 ಗಂಟೆಗೆ (01:18 GMT) ನಾಲ್ಕನೇ ಮಹಡಿಯಲ್ಲಿ ಬೆಂಕಿ ಪತ್ತೆಯಾಗಿದ್ದು ಬೆಂಕಿ ಕಾಣಿಸಿಕೊಂಡ ಅರ್ಧ ಗಂಟೆಯ ನಂತರ ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.